ಟ್ವೆಂಟಿ-20 ಕ್ರಿಕೆಟ್: ಎಂ.ಎಸ್.ಧೋನಿ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ
ಇಂದೋರ್ : ರೋಹಿತ್ ಶರ್ಮಾ ಅವರ ಬ್ಯಾಟ್ನಿಂದ ರವಿವಾರ ಒಂದೇ ಒಂದು ರನ್ ಬರದಿದ್ದರೂ ಅಫ್ಘಾನಿಸ್ತಾನ ತಂಡದ ವಿರುದ್ಧ ಭಾರತವು ಆರು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಅವರು ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ನಾಯಕನಾಗಿ ಹೊರ ಹೊಮ್ಮಿದರು. ಈ ವೇಳೆ ಎಂ.ಎಸ್. ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು.
ರವಿವಾರದ ತನಕ ಧೋನಿ ಅವರು ನಾಯಕನಾಗಿರುವ 72 ಟಿ-20 ಪಂದ್ಯಗಳಲ್ಲಿ 41ರಲ್ಲಿ ಜಯ ಸಾಧಿಸಿ ಭಾರತದ ಪರ ಗರಿಷ್ಠ ಗೆಲುವು ಪಡೆದ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ರೋಹಿತ್ ನಾಯಕನಾಗಿ 53 ಟಿ-20 ಪಂದ್ಯಗಳಲ್ಲಿ 41ನೇ ಗೆಲುವು ದಾಖಲಿಸಿ ಧೋನಿ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ರೋಹಿತ್ ಪ್ರಸಕ್ತ ಸರಣಿಯಲ್ಲಿ 14 ತಿಂಗಳ ವಿರಾಮದ ನಂತರ ಟಿ-20 ಕ್ರಿಕೆಟ್ಗೆ ವಾಪಸಾಗಿದ್ದಾರೆ.
ಗೆಲ್ಲಲು 173 ರನ್ ಗುರಿ ಪಡೆದಿದ್ದ ಭಾರತ ತಂಡ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(68 ರನ್, 34 ಎಸೆತ) ಹಾಗೂ ಆಲ್ರೌಂಡರ್ ಶಿವಂ ದುಬೆ(ಔಟಾಗದೆ 63, 32 ಎಸೆತ)ಅರ್ಧಶತಕಗಳ ಕೊಡುಗೆಯ ಸಹಾಯದಿಂದ ಸುಲಭ ಗೆಲುವು ದಾಖಲಿಸಿತು.
ರೋಹಿತ್ ಶರ್ಮಾ ಅವರು ಫಝಲ್ ಹಕ್ ಫಾರೂಕಿ ಬೌಲಿಂಗ್ನಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಟಿ-20 ಕ್ರಿಕೆಟಿಗೆ ದೀರ್ಘ ಸಮಯದ ನಂತರ ಪುನರಾಗಮನ ಮಾಡಿರುವ ಇನ್ನೋರ್ವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 29 ರನ್ ಗಳಿಸಿ ನವೀನ್ ಉಲ್ ಹಕ್ಗೆ ವಿಕೆಟ್ ಒಪ್ಪಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ ಗುಲ್ಬದಿನ್ ನೈಬ್(57 ರನ್, 35 ಎಸೆತ)ಅರ್ಧಶತಕದ ನೆರವಿನಿಂದ ಬ್ಯಾಟಿಂಗ್ ಸ್ನೇಹಿ ಹೋಲ್ಕರ್ ಸ್ಟೇಡಿಯಮ್ನಲ್ಲಿ 172 ರನ್ ಗಳಿಸಿ ಆಲೌಟಾಯಿತು. ಅರ್ಷದೀಪ್ ಸಿಂಗ್(3-32)ಯಶಸ್ವಿ ಪ್ರದರ್ಶನ ನೀಡಿದರು.
ರೋಹಿತ್ 150 ಟಿ-20 ಪಂದ್ಯಗಳನ್ನಾಡಿದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರವಾಗಿ ರವಿವಾರ ಮತ್ತೊಂದು ದಾಖಲೆ ನಿರ್ಮಿಸಿದರು. ಈ ಗೆಲುವಿನೊಂದಿಗೆ ಭಾರತವು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ.