ಸೇನಾ ಶಿಬಿರದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಎರಡು ವಾರ ತರಬೇತಿ

Update: 2024-04-01 16:48 GMT

Photo: X \ @TheRealPCB

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ಕಾಕುಲ್ ನ ಆರ್ಮಿ ಸ್ಕೂಲ್ ಆಫ್ ಫಿಸಿಕಲ್ ಟ್ರೈನಿಂಗ್(ಎಎಸ್ಪಿಟಿ)ನಲ್ಲಿ ಎರಡು ವಾರಗಳ ಕಾಲ ತರಬೇತಿ ಶಿಬಿರದಲ್ಲಿ ಭಾಗವಹಿಸಲಿವೆ.

ಸೇನಾ ನೆಲೆಯ ಶಿಬಿರದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ವಿವಿಧ ರೀತಿಯ ಕಸರತ್ತು ಹಾಗೂ ಅಭ್ಯಾಸಗಳನ್ನು ನಡೆಸಿದ್ದು, ಇದರ ವೀಡಿಯೊವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಹಂಚಿಕೊಂಡಿದೆ.

ತರಬೇತಿ ಶಿಬಿರದಲ್ಲಿ ಪಾಕಿಸ್ತಾನದ ವೇಗದ ಬೌಲರ್ಗಳಾದ ಶಾಹೀನ್ ಶಾ ಅಫ್ರಿದಿ, ಹಾರಿಸ್ ರವೂಫ್, ಮುಹಮ್ಮದ್ ಆಮಿರ್ ಹಾಗೂ ನಸೀಮ್ ಶಾ ಸಹಿತ ಮತ್ತಿತರರು ಭಾಗವಹಿಸಿದ್ದರು.

ಈ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಗೆ ತಂಡವನ್ನು ಮರಳಿ ಹಳಿಗೆ ತರುವ ಪ್ರಯತ್ನದಲ್ಲಿ ಪಿಸಿಬಿ, ರವಿವಾರ ಬಾಬರ್ ಆಝಮ್ರನ್ನು ಏಕದಿನ ಹಾಗೂ ಟಿ-20 ತಂಡಗಳ ನಾಯಕರನ್ನಾಗಿ ಮರು ನೇಮಿಸಿತ್ತು.

ಭಾರತದಲ್ಲಿ ನಡೆದಿದ್ದ 50 ಓವರ್ಗಳ ವಿಶ್ವಕಪ್ ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮೊದಲ ಸುತ್ತಿನಲ್ಲಿ ಸೋತ ಹಿನ್ನೆಲೆಯಲ್ಲಿ ಆಝಮ್ ಕಳೆದ ವರ್ಷ ನವೆಂಬರ್ನಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್ ನಾಯಕತ್ವಕ್ಕೆ ತನ್ನ ರಾಜೀನಾಮೆ ಸಲ್ಲಿಸಿದ್ದರು.

ಆಝಮ್ ರಾಜೀನಾಮೆಯ ನಂತರ ಟೆಸ್ಟ್ ತಂಡದ ನಾಯಕನಾಗಿ ಶಾನ್ ಮಸೂದ್, ಟ್ವೆಂಟಿ-20 ತಂಡದ ನಾಯಕನಾಗಿ ಶಾಹೀನ್ ಅಫ್ರಿದಿ ಆಯ್ಕೆಯಾಗಿದ್ದರು. ಪಾಕಿಸ್ತಾನ ತಂಡ ಶಾಹೀನ್ ನಾಯಕತ್ವದಲ್ಲಿ ಜನವರಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯನ್ನು 1-4 ಅಂತರದಿಂದ ಕಳೆದುಕೊಂಡಿತ್ತು. ಏಕೈಕ ಪಂದ್ಯ ಗೆಲ್ಲುವಲ್ಲಿ ಶಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News