2019ರ ವಿಶ್ವಕಪ್‌ನಲ್ಲಿ ಮಾಡಿದ ‘ದೊಡ್ಡ ತಪ್ಪು’ ಒಪ್ಪಿಕೊಂಡ ಅಂಪಾಯರ್ ಎರಾಸ್ಮಸ್
ಹೊಸದಿಲ್ಲಿ: 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ನಾನು ಒಂದು ದೊಡ್ಡ ತಪ್ಪು ಮಾಡಿದ್ದೇನೆ ಎಂದು ಇತ್ತೀಚೆಗೆ ನಿವೃತ್ತರಾಗಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಅಂಪಾಯರ್ ಮರೈಸ್ ಎರಾಸ್ಮಸ್ ಒಪ್ಪಿಕೊಂಡಿದ್ದಾರೆ.
ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್ ವಿವಾದಾತ್ಮಕವಾಗಿ ಜಯ ಗಳಿಸಿತ್ತು. ಅದು ಇಂಗ್ಲೆಂಡ್‌ನ ಚೊಚ್ಚಲ ಏಕದಿನ ವಿಶ್ವಕಪ್ ವಿಜಯವಾಗಿತ್ತು.
ಆ ಪಂದ್ಯವು ಟೈನಲ್ಲಿ ಮುಕ್ತಾಯಗೊಂಡಿತು. ಬಳಿಕ ವಿಜಯಿಯನ್ನು ನಿರ್ಧರಿಸಿಲು ಆಡಲಾದ ಸೂಪರ್ ಓವರ್‌ನಲ್ಲೂ ತಂಡಗಳು ಸಮಬಲಗೊಂಡವು. ಅಂತಿಮವಾಗಿ, ಹೆಚ್ಚು ಬೌಂಡರಿಗಳನ್ನು ಗಳಿಸಿದ ತಂಡವನ್ನು ವಿಜಯಿ ಎಂಬುದಾಗಿ ಘೋಷಿಸಲಾಯಿತು. ಈಗ ಆ ನಿಯಮವನ್ನು ರದ್ದುಗೊಳಿಸಲಾಗಿದೆ.
ಪಂದ್ಯದ ವೇಳೆ ನಡೆದ ಗಂಭೀರ ತಪ್ಪೊಂದನ್ನು ಎರಾಸ್ಮಸ್ ಈಗ ಒಪ್ಪಿಕೊಂಡಿದ್ದಾರೆ. 50ನೇ ಓವರ್‌ನಲ್ಲಿ, ಇಂಗ್ಲೆಂಡ್‌ನ ಗೆಲುವಿಗೆ ಮೂರು ಎಸೆತಗಳಲ್ಲಿ ಒಂಭತ್ತು ರನ್‌ಗಳ ಅಗತ್ಯವಿತ್ತು. ಆಗ ಎರಾಸ್ಮಸ್ ಮತ್ತು ಅವರ ಸಹ ಅಂಪಾಯರ್ ಕುಮಾರ್ ಧರ್ಮಸೇನ ಓವರ್ ತ್ರೋಗಾಗಿ ಇಂಗ್ಲೆಂಡ್‌ಗೆ ಆರು ರನ್‌ಗಳನ್ನು ನೀಡಿದರು. ಆದರೆ, ಓವರ್ ತ್ರೋಗಿಂತ ಮೊದಲು ಬ್ಯಾಟರ್‌ಗಳು ಎರಡನೇ ರನ್ನನ್ನು ಪೂರ್ಣಗೊಳಿಸಿರಲಿಲ್ಲವಾದುದರಿಂದ ಇಂಗ್ಲೆಂಡ್‌ಗೆ ಕೇವಲ ಐದು ರನ್‌ಗಳನ್ನು ನೀಡಬೇಕಾಗಿತ್ತು ಎನ್ನುವುದು ಬಳಿಕ ಗೊತ್ತಾಯಿತು.
ಪಂದ್ಯದ ಮಹತ್ವದ ಘಟ್ಟದಲ್ಲಿ ಆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಒಂದು ವೇಳೆ, ಸರಿಯಾದ ನಿರ್ಧಾರವನ್ನು ಅಂಪಾಯರ್‌ಗಳು ತೆಗೆದುಕೊಂಡಿದ್ದರೆ ಫಲಿತಾಂಶ ಬೇರೆಯಾಗಿರುವ ಸಾಧ್ಯತೆಯಿತ್ತು.
‘‘ಮರುದಿನ ಬೆಳಗ್ಗೆ ಉಪಾಹಾರಕ್ಕಾಗಿ ನಾನು ನನ್ನ ಹೊಟೇಲ್ ಕೋಣೆಯ ಬಾಗಿಲು ತೆಗೆದು ಹೊರಬಂದಾಗ, ಕುಮಾರ್ ಕೂಡ ಅದೇ ಹೊತ್ತಿಗೆ ಬಾಗಿಲು ತೆಗೆದು ಹೊರಬಂದರು. ‘ನಿನ್ನೆ ನಾವೊಂದು ದೊಡ್ಡ ತಪ್ಪು ಮಾಡಿದ್ದೇವೆ, ಗೊತ್ತಾಯ್ತಾ?’ ಎಂದು ಅವರು ಕೇಳಿದರು. ನನಗೆ ಆ ತಪ್ಪಿನ ಬಗ್ಗೆ ತಿಳಿದದ್ದು ಆಗಲೇ’’ ಎಂದು ‘ದ ಟೆಲಿಗ್ರಾಫ್’ನೊಂದಿಗೆ ಮಾತನಾಡಿದ ಎರಾಸ್ಮಸ್ ಹೇಳಿದರು.