ವಿನೇಶ್ ಪಾಲಿನ ಬೆಳ್ಳಿ ಪದಕವನ್ನು ದೋಚಲಾಗಿದೆ : ಸಚಿನ್ ತೆಂಡುಲ್ಕರ್ ಅಸಮಾಧಾನ

Update: 2024-08-09 13:30 GMT

 ವಿನೇಶ್ ಫೋಗಟ್ , ಸಚಿನ್ ತೆಂಡುಲ್ಕರ್ | PC : PTI 

ಹೊಸದಿಲ್ಲಿ : 50 ಕೆಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯ ಆರಂಭವಾಗುವುದಕ್ಕೂ ಮುನ್ನವೇ ಅನರ್ಹತೆಗೊಳಗಾಗಿದ್ದ ವಿನೇಶ್ ಫೋಗಟ್ ಅವರಿಗೆ ಅರ್ಹವಾದ ಬೆಳ್ಳಿ ಪದಕವನ್ನು ನೀಡಬೇಕು ಎಂದು ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಆಗ್ರಹಿಸಿದ್ದಾರೆ.

ಕ್ರೀಡಾಕೂಟದುದ್ದಕ್ಕೂ ರೋಮಾಂಚಕ ಪ್ರದರ್ಶನ ನೀಡಿ, ಫೈನಲ್ ಸುತ್ತಿಗೆ ಪ್ರವೇಶಿಸಿದ್ದ ವಿನೇಶ್ ಫೋಗಟ್, ತಮ್ಮ ಅನರ್ಹತೆಯ ನಂತರ ಕುಸ್ತಿಗೆ ವಿದಾಯ ಘೋಷಿಸಿದ್ದರು ಹಾಗೂ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆಗಸ್ಟ್ 8ರಂದು ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಚಿನ್ ತೆಂಡುಲ್ಕರ್, “ವಿನೇಶ್ ನ್ಯಾಯಯುತವಾಗಿ ಫೈನಲ್ ಪ್ರವೇಶಿಸಿದ್ದರು. ಆಕೆಯ ಪಾಲಿನ ಬೆಳ್ಳಿ ಪದಕವನ್ನು ದೋಚಲಾಗಿದೆ. ಒಂದು ವೇಳೆ ಕುಸ್ತಿಪಟುವೇನಾದರೂ ಉದ್ದೀಪನ ಔಷಧವನ್ನು ಸೇವಿಸಿದ್ದರೆ, ಅಂಥವರನ್ನು ಅನರ್ಹಗೊಳಿಸುವುದರಲ್ಲಿ ಅರ್ಥವಿರುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಎಲ್ಲ ಕ್ರೀಡೆಗಳೂ ತಮ್ಮದೇ ಆದ ನಿಯಮಾವಳಿಗಳನ್ನು ಹೊಂದಿರುತ್ತವೆ ಹಾಗೂ ಆ ನಿಯಮಾವಳಿಗಳನ್ನು ವಿಷಯದ ಪರಿಧಿಯಲ್ಲಿ ನೋಡಬೇಕಾಗುತ್ತದೆ, ಕಾಲ ಕಾಲಕ್ಕೆ ಮರುಪರಿಶೀಲನೆಗೂ ಒಳಪಡಿಸಬೇಕಾಗುತ್ತದೆ. ವಿನೇಶ್ ಫೋಗಟ್ ನ್ಯಾಯಯುತವಾಗಿ ಹಾಗೂ ದಿಟ್ಟವಾಗಿ ಫೈನಲ್ ಪ್ರವೇಶಿಸಿದ್ದರು. ಆದರೆ, ಆಕೆಯನ್ನು ಫೈನಲ್ ಗೂ ಮುನ್ನ ಅನರ್ಹಗೊಳಿಸಿರುವುದು ಆಕೆ ಅರ್ಹತೆ ಹೊಂದಿದ್ದ ಬೆಳ್ಳಿ ಪದಕವನ್ನು ದೋಚಿದಂತೆ” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

“ನಾವೆಲ್ಲ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಿಗಾಗಿ ಎದುರು ನೋಡುತ್ತಿದ್ದು, ವಿನೇಶ್ ಪೋಗಟ್ ಗೆ ಅರ್ಹವಾಗಿರುವುದು ಸಿಗಲಿದೆ ಎಂದು ಆಶಿಸೋಣ” ಎಂದು ತೆಂಡುಲ್ಕರ್ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News