ವಿನೇಶ್ ಫೋಗಟ್ ಮೇಲ್ಮನವಿ | ಆ.16ರ ತನಕ ತೀರ್ಪು ಮುಂದೂಡಿದ ಸಿಎಎಸ್

Update: 2024-08-13 16:11 GMT

ವಿನೇಶ್ ಫೋಗಟ್ | PTI 

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಅನರ್ಹತೆಯ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿಯ ಕುರಿತ ತನ್ನ ತೀರ್ಪನ್ನು ಕ್ರೀಡಾ ನ್ಯಾಯ ಮಂಡಳಿಯು(ಸಿಎಎಸ್) ಆಗಸ್ಟ್ 16ರ ತನಕ ಮುಂದೂಡಿದೆ ಎಂದು ವರದಿಯಾಗಿದೆ.

ಇದೀಗ ಮೂರನೇ ಬಾರಿ ಸಿಎಎಸ್ ತನ್ನ ತೀರ್ಪನ್ನು ಮುಂದೂಡಿದೆ.

ಕಳೆದ ಮಂಗಳವಾರ ಜಪಾನ್‌ ನ ಯುಯಿ ಸುಸಾಕಿ ಸಹಿತ ಮೂವರು ಕುಸ್ತಿಪಟುಗಳನ್ನು ಹೆಡೆಮುರಿ ಕಟ್ಟಿದ ವಿನೇಶ್ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಫೈನಲ್‌ ಗೆ ಪ್ರವೇಶಿಸಿದ್ದರು. ಬುಧವಾರ ಬೆಳಗ್ಗೆ ಅಮೆರಿಕದ ಸಾರಾ ಹಿಲ್ಡ್‌ ಬ್ರಾಂಡ್ ವಿರುದ್ದ ಫೈನಲ್ ಪಂದ್ಯಕ್ಕಿಂತ ಮೊದಲು ವಿನೇಶ್ ನಿಗದಿತ 50 ಕೆಜಿಗಿಂತ 100 ಗ್ರಾಂ ಹೆಚ್ಚು ತೂಕ ಇದ್ದಾರೆಂಬ ಕಾರಣಕ್ಕೆ ಒಲಿಂಪಿಕ್ಸ್‌ನಿಂದಲೇ ಅನರ್ಹರಾಗಿದ್ದರು.

ಘಟನೆಯ ನಾಟಕೀಯ ತಿರುವುಗಳಿಂದ ಆಘಾತಕ್ಕೊಳಗಾದ ವಿನೇಶ್ ಅವರು ಕಳೆದ ಬುಧವಾರ ಅನರ್ಹತೆ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಝ್ಮನ್ ಲೋಪೆಝ್ ಅವರೊಂದಿಗೆ ತನಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನಂತಿಸಿದ್ದರು. ಲೋಪೆಝ್ ಸೆಮಿ ಫೈನಲ್‌ನಲ್ಲಿ ವಿನೇಶ್ ವಿರುದ್ದ ಸೋತಿದ್ದರೂ ಫೈನಲ್‌ಗೆ ಭಡ್ತಿ ನೀಡಲಾಗಿತ್ತು.

ಒಲಿಂಪಿಕ್ಸ್ ಫೈನಲ್‌ ನಿಂದ ಅನರ್ಹಗೊಂಡ ಒಂದು ದಿನದ ನಂತರ ವಿನೇಶ್ ಕುಸ್ತಿಗೆ ಕಣ್ಣೀರಿನ ವಿದಾಯ ಹೇಳಿದರು. ತನಗೆ ಕುಸ್ತಿಯಲ್ಲಿ ಮುಂದುವರಿಯುವ ಶಕ್ತಿ ಇಲ್ಲ. ಕುಸ್ತಿ ಎದುರು ನಾನು ಸೋತೆ ಎಂದು ಹೇಳಿದ್ದರು.

ಮೂರನೇ ಬಾರಿ ಒಲಿಂಪಿಕ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡಿರುವ 29ರ ಹರೆಯದ ವಿನೇಶ್‌ಗೆ ವಿಶ್ವದಾದ್ಯಂತ ಕ್ರೀಡಾ ದಿಗ್ಗಜರು ಬೆಂಬಲ ವ್ಯಕ್ತಪಡಿಸಿದ್ದರು.

ಸಿಎಎಸ್‌ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಫ್ರೆಂಚ್ ವಕೀಲರು ವಿನೇಶ್ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ(ಐಒಎ)ನೆರವು ನೀಡಿದೆ. ಹಿರಿಯ ವಕೀಲರಾದ ಹರೀಶ್ ಸಾಳ್ವೆ ಹಾಗೂ ವಿದುಷ್ಪತ್ ಸಿಂಘಾನಿಯಾ ಅವರನ್ನು ಪ್ರಕರಣದಲ್ಲಿ ವಿನೇಶ್‌ಗೆ ಸಹಾಯ ಮಾಡಲು ನಿಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News