ರಕ್ಷಾ ಬಂಧನ ಆಚರಿಸಿದ ವಿನೇಶ್ ಫೋಗಟ್
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕೈಗೆ ಬಂದ ಪದಕವನ್ನು ಕಳೆದುಕೊಂಡ ದುಃಖದಲ್ಲಿ ಭಾರವಾದ ಹೃದಯದೊಂದಿಗೆ ಕುಸ್ತಿಪಟು ವಿನೇಶ್ ಫೋಗಟ್ ಶನಿವಾರ ಭಾರತಕ್ಕೆ ಮರಳಿದ್ದಾರೆ. ಅವರಿಗೆ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತು ಅವರ ಸ್ವಗ್ರಾಮ ಬಬಾಲಿಯಲ್ಲಿ ಭವ್ಯ ಸ್ವಾಗತ ನೀಡಲಾಗಿತ್ತು.
ಅವರು ಸೋಮವಾರ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದಾರೆ. ಅವರ ವಿಶೇಷ ವೀಡಿಯೊ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 500 ರೂಪಾಯಿ ನೋಟ್ ಗಳ ಅಟ್ಟಿಯೊಂದನ್ನು ಹಿಡಿದುಕೊಂಡು ನಿಂತಿರುವ ಫೋಗಟ್ ರನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.
‘‘ನನಗೀಗ ಹೆಚ್ಚು ಕಡಿಮೆ 30 ವರ್ಷ. ಕಳೆದ ವರ್ಷ ಅವರು ನನಗೆ 500 ರೂ. ನೀಡಿದ್ದರು. ಅದರ ಬಳಿಕ ಇದು (ನೋಟುಗಳ ಅಟ್ಟಿಯತ್ತ ಬೆಟ್ಟು ಮಾಡುತ್ತಾ). ಅವರು ತನ್ನ ಇಡೀ ಬದುಕಿನಲ್ಲಿ ಗಳಿಸಿದ್ದು ಇಷ್ಟೇ ಹಣ (ತಮಾಷೆಗಾಗಿ ಹೇಳಿದ್ದು). ಅದನ್ನು ಅವರು ನನಗೆ ಕೊಟ್ಟಿದ್ದಾರೆ’’ ಎಂದು ತನ್ನ ಸಹೋದರನ ಬಗ್ಗೆ ಮಾತನಾಡುತ್ತಾ ವಿನೇಶ್ ಹೇಳುತ್ತಾರೆ. ಅವರ ಸಹೋದರ ಕೂಡ ಅವರ ಮಾತುಗಳನ್ನು ಕೇಳಿ ನಗುವುದು ಕಾಣುತ್ತದೆ.