ಏಕದಿನ ವಿಶ್ವಕಪ್‌ನ ಚೊಚ್ಚಲ ವಿಕೆಟ್ ಪಡೆದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ ಚೊಚ್ಚಲ ವಿಕೆಟ್ ಪಡೆದು ಸಂಭ್ರಮಿಸಿದರು.
ಭಾರತ ನೀಡಿದ 411 ರನ್ ಬೆನ್ನತ್ತಿದ ನೆದರ್ಲ್ಯಾಂಡ್ಸ್ 72 ರನ್ ಗಳಿಸುವಷ್ಟರಲ್ಲಿಯೇ ತನ್ನ ಆರಂಭಿಕ ಮೂವರು ಬ್ಯಾಟರ್ ಗಳನ್ನು ಕಳೆದುಕೊಂಡಿತು. ಬಳಿಕ ಜೊತೆಯಾದ ಸೈಬ್ರಾಂಡ್ ಹಾಗೂ ನಾಯಕ ಸ್ಕಾಟ್ ಎಡ್ವಡ್ಸ್ ಉತ್ತಮ ಜೊತೆಯಾಟ ನಿರ್ವಹಿಸಿದರು. ಈ ಜೊತೆಯಾಟ ಬೇರ್ಪಡಿಸಲು ವಿರಾಟ್ ಕೊಹ್ಲಿ ಕೈಗೆ ಬಾಲ್ ನೀಡಿದ ನಾಯಕ ರೋಹಿತ್ ಶರ್ಮಾ, ಜೊತೆಯಾಟ ಮುರಿಯುವಲ್ಲಿ ಯಶಸ್ವಿಯಾದರು. 25ನೇ ಓವರ್ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ ಅದೇ ಓವರ್ ನ ಮೂರನೇ ಬಾಲ್ ನಲ್ಲಿ ನಾಯಕ ಸ್ಕಾಟ್ ಎಡ್ವಡ್ಸ್ ವಿಕೆಟ್ ಕಬಳಿಸಿದರು. ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತ ಎಡ್ವಡ್ಸ್ ಪೆವಿಲಿಯನ್ ಸೇರಿದರು.
ಈ ಪಂದ್ಯದಲ್ಲಿ 3 ಓವರ್ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ 13 ರನ್ ಗೆ 1ವಿಕೆಟ್ ಪಡೆದು ಎಲ್ಲರ ಗಮನ ಸೆಳೆದರು.
48 ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ರೋಹಿತ್ ಶರ್ಮಾ, 54 ರನ್ ಗಳಿಸಿ ಬ್ಯಾಂಟಿಂಗ್ ಮಾಡಿದ್ದ ತೇಜಾ ನಿದಾಮರು ಅವರ ವಿಕೆಟ್ ಪಡೆದರು. ಆ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ವಿಕೆಟ್ ಗಳಿಸಿದರು.
ಈ ಪಂದ್ಯದಲ್ಲಿ ಯುವ ಬ್ಯಾಟರ್ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಕೂಡ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.