ಪ್ಯಾರಿಸ್‌ನಲ್ಲಿ ವಿನೇಶ್‌ ಫೋಗಟ್‌ ಪರ 'ಬದಲಿಯಾಗಿ' ನಿರ್ಧಾರ ಕೈಗೊಳ್ಳುತ್ತಿರುವ ಕುಸ್ತಿ ಫೆಡರೇಷನ್‌ ಅಧ್ಯಕ್ಷ: ದಿಲ್ಲಿ ಹೈಕೋರ್ಟಿನಲ್ಲಿ ಕುಸ್ತಿಪಟುವಿನ ವಕೀಲರ ಮಾಹಿತಿ

Update: 2024-08-09 07:29 GMT

ವಿನೇಶ್‌ ಫೋಗಟ್‌ (Photo: PTI)

ಹೊಸದಿಲ್ಲಿ: ಪ್ಯಾರಿಸ್‌ನ ಒಲಿಂಪಿಕ್ಸ್‌ ಗ್ರಾಮದಲ್ಲಿ ಭಾರತದ ಕುಸ್ತಿ ಫೆಡರೇಷನ್‌ ಮತ್ತು ಅದರ ಅಧ್ಯಕ್ಷ ಸಂಜಯ್‌ ಸಿಂಗ್‌ ಅವರು ಒಲಿಂಪಿಕ್ಸ್‌ನ ಫೈನಲ್‌ನಲ್ಲಿ ಸ್ಪರ್ಧಿಸುವುದರಿಂದ ಅನರ್ಹಗೊಂಡ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ ಅವರ ಪರ 'ಬದಲಿಯಾಗಿ' ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ವಿನೇಶ್‌ ಫೋಗಟ್‌ ಅವರ ವಕೀಲರು ಗುರುವಾರ ದಿಲ್ಲಿ ಹೈಕೋರ್ಟಿಗೆ ಮಾಹಿತಿ ನೀಡಿದ್ದಾರೆ.

ಕುಸ್ತಿ ಫೆಡರೇಷನ್‌ಗೆ ಹೊಸತಾಗಿ ಚುನಾವಣೆ ನಡೆಸಬೇಕೆಂದು ಕೋರಿ ಕುಸ್ತಿಪಟುಗಳಾದ ಬಜರಂಗ್‌ ಪುನಿಯಾ, ಸಾಕ್ಷಿ ಮಲಿಕ್‌ ಮತ್ತು ವಿನೇಶ್‌ ಫೋಗಟ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆದಾಗ ವಕೀಲರು ಮೇಲಿನಂತೆ ಹೇಳಿದರು.

ಕುಸ್ತಿ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯನ್ನು ಡಿಸೆಂಬರ್‌ 2023ರಂದು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದರೂ ಫೆಡರೇಶನ್‌ ಪ್ರಾಕ್ಸಿಗಳಿಂದ ಮತ್ತು ಸಂಜಯ್‌ ಸಿಂಗ್‌ ಅವರಿಂದ ನಡೆಸಲ್ಪಡುತ್ತಿದೆ ಮತ್ತು ವಿನೇಶ್‌ಗೆ ಏನು ಮಾಡಬೇಕೆಂಬ ಕುರಿತು ನಿರ್ಧರಿಸುತ್ತಿದೆ ಎಂದು ವಿನೇಶ್‌ ಪರ ವಕೀಲ ರಾಹುಲ್‌ ಮೆಹ್ರಾ ಹೇಳಿದರು.

ಗುರುವಾರ ಕೇಂದ್ರದ ಪರ ವಕೀಲ ಅನಿಲ್‌ ಸೋನಿ ತಮ್ಮ ವಾದ ಮಂಡನೆಗೆ ನಿರಾಕರಿಸಿದರಲ್ಲದೆ ಇಡೀ ದೇಶ ವಿನೇಶ್‌ ಪರ ನಿಂತಿದೆ ಎಂದು ಹೇಳಿದರು.

ಕೇಂದ್ರ ತನ್ನ ವಾದಗಳನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ನಿಗದಿಪಡಿಸಿದೆ.

ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿ ಸಂಜಯ್‌ ಸಿಂಗ್‌ ಆಯ್ಕೆಗೊಂಡ ನಂತರ ಸಾಕ್ಷಿ ಮಲಿಕ್‌ ತಾವಿನ್ನು ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News