ರೋಹಿತ್- ಕೊಹ್ಲಿ ಸ್ಥಾನವನ್ನು ತುಂಬಬಲ್ಲವರು ಯಾರು?

Update: 2024-09-13 02:39 GMT

PC: x.com/mufaddal_vohra

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಯುವ ಆಟಗಾರರು ಯಾರು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. ಹಿರಿಯ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ಪ್ರಕಾರ, ಈ ಇಬ್ಬರು ದಿಗ್ಗಜರು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗುವ ಸಂದರ್ಭದಲ್ಲಿ ಆ ಸ್ಥಾನವನ್ನು ಶುಭಮನ್ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್ ತುಂಬಬಲ್ಲರು.

ಶುಂಭಕರ್ ಮಿಶ್ರಾ ಅವರ ಪಾಡ್ ಕಾಸ್ಟ್ ನಲ್ಲಿ ಈ ಅಂಶವನ್ನು ಬಹಿರಂಗಪಡಿಸಿರುವ ಚಾವ್ಲಾ, ಈ ಇಬ್ಬರು ಯುವ ಆಟಗಾರರನ್ನು "ವಿಶೇಷ ಪ್ರತಿಭೆ"ಗಳು ಎಂದು ಬಣ್ಣಿಸಿದ್ದಾರೆ.

ಕೊಹ್ಲಿ ಹಾಗೂ ರೋಹಿತ್ ಶರ್ಮಾ, 2024ರ ಟಿ20 ವಿಶ್ವಕಪ್ ಗೆದ್ದ ಸಂದರ್ಭದಲ್ಲೇ ಟಿ20 ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು. ಟೆಸ್ಟ್ ಹಾಗೂ ಏಕದಿನ ಪಂದ್ಯಕ್ಕೆ ಮಾತ್ರ ಲಭ್ಯರಿದ್ದಾರೆ.

ನವೆಂಬರ್ ನಲ್ಲಿ ರೋಹಿತ್ಗೆದ 37 ವರ್ಷ ತುಂಬಿದರೆ ಕೊಹ್ಲಿಗೆ 36 ವರ್ಷವಾಗುತ್ತಿದೆ. ಇವರ ವೃತ್ತಿಬದುಕು ಕೊನೆಗೊಳ್ಳುವ ಸೂಚನೆ ಇದಾಗಿದೆ.

ಗಿಲ್ ಅವರ ಪ್ರಬಲ ತಂತ್ರಗಾರಿಕೆಯನ್ನು ನಿರ್ಣಾಯಕ ಎಂದು ಚಾವ್ಲಾ ವಿಶ್ಲೇಷಿಸಿದ್ದಾರೆ. "ಶುಭಮನ್ ಗಿಲ್-ಏಕೆಂದರೆ ಆತನ ತಂತ್ರಕೌಶಲದಿಂದಾಗಿ. ಆಟಗಾರ ಕಳಪೆ ಫಾರ್ಮ್ ನಲ್ಲಿದ್ದಾಗ, ತಾಂತ್ರಿಕ ಕೌಶಲ ಹೊಂದಿರುವ ಆಟಗಾರ ಅದರಿಂದ ಹೊರಬರಬಲ್ಲ. ಒಳ್ಳೆಯ ತಂತ್ರಗಳನ್ನು ಹೊಂದಿದ ಆಟಗಾರ ಸುಧೀರ್ಘ ಕಾಲ ತಂಡದಿಂದ ಹೊರಗಿರಲು ಸಾಧ್ಯವಿಲ್ಲ. ಖಚಿತವಾಗಿಯೂ ಶುಭಮನ್ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್" ಎಂದು ಭವಿಷ್ಯ ನುಡಿದಿದ್ದಾರೆ.

25 ವರ್ಷ ವಯಸ್ಸಿನ ಗಿಲ್ 25 ಟೆಸ್ಟ್, 47 ಏಕದಿನ ಹಾಗೂ 21 ಟಿ20 ಪಂದ್ಯಗಳನ್ನು ಆಡಿದ್ದು, ನಾಲ್ಕು ಟೆಸ್ಟ್ ಶತಕ, ಆರು ಏಕದಿನ ಶತಕ ಮತ್ತು ಒಂದು ಟಿ20 ಶತಕ ಸೇರಿದಂತೆ ಕ್ರಮವಾಗಿ 1492, 2338 ಮತ್ತು 578 ರನ್ ಗಳಿಸಿದ್ದಾರೆ. ಗಾಯಕ್ವಾಡ್ ಆರು ಏಕದಿನ ಹಾಗೂ 23 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 115 ಹಾಗೂ 633 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News