ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದ್ದೇಕೆ?

Update: 2024-02-28 17:31 GMT

ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ |Photo: NDTV 

ಮುಂಬೈ : 2023-24ನೇ ಋತುವಿಗೆ ಬಿಸಿಸಿಐ ಪ್ರಕಟಿಸಿರುವ ಭಾರತ ತಂಡದ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿ (ಹಿರಿಯ ಪುರುಷರು)ಯಿಂದ ಇಬ್ಬರು ಪ್ರಮುಖ ಆಟಗಾರರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗಿದೆ.

ತೀರಾ ಇತ್ತೀಚಿನವರೆಗೆ ಈ ಇಬ್ಬರು ತಾರಾ ಆಟಗಾರರು ಭಾರತ ತಂಡದ ಭಾಗವಾಗಿದ್ದರು. ಡಿಸೆಂಬರ್ ತಿಂಗಳಲ್ಲಿ ಭಾರತ ತಂಡವು ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ಪ್ರವಾಸವು ಇಶಾನ್ ಕಿಶನ್ ಭಾಗಿಯಾಗಿದ್ದ ಕೊನೆಯ ಪ್ರವಾಸವಾಗಿದ್ದರೆ, ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಪ್ರಥಮ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ತಂಡದ ಸದಸ್ಯರಾಗಿದ್ದರು. ಹೀಗಿದ್ದೂ, ಈ ಇಬ್ಬರು ಹಿರಿಯ ಆಟಗಾರರ ಹೆಸರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿದೆ. ವಾಸ್ತವವಾಗಿ ಈ ಒಂದು ವಾಕ್ಯದ ಮೂಲಕ ಈ ಇಬ್ಬರು ಆಟಗಾರರನ್ನು ಕೈಬಿಟ್ಟಿರುವ ಕುರಿತು ಪ್ರತ್ಯೇಕವಾಗಿ ನಮೂದಿಸಿದೆ: “ದಯವಿಟ್ಟು ಗಮನಿಸಿ,ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರನ್ನು ಈ ಸುತ್ತಿನ ಶಿಫಾರಸಿನಲ್ಲಿ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ”.

ಹಾಗಾದರೆ, 2023-24ನೇ ಋತುವಿಗೆ ಬಿಸಿಸಿಐನ ಭಾರತ ತಂಡದ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯಿಂದ (ಹಿರಿಯ ಪುರುಷರು) ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಏಕೆ ಕೈಬಿಡಲಾಯಿತು?

ಇಶಾನ್ ಕಿಶನ್ ಪ್ರಕರಣ

ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಏಕೆ ಕೈಬಿಡಲಾಗಿದೆ ಎಂಬ ಕುರಿತು ಯಾವುದೇ ಅಧಿಕೃತ ಕಾರಣ ನೀಡದೆ ಇದ್ದರೂ, ಬಿಸಿಸಿಐ ಪ್ರಕಟಣೆ ಒಂದು ಸುಳಿವನ್ನು ನೀಡಿದೆ: “ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದೆ ಇರುವಾಗ ದೇಶೀಯ ಕ್ರಿಕೆಟ್ ನಲ್ಲಿ ಭಾಗಿಯಾಗಿರುವ ಕುರಿತು ನಿದರ್ಶನಗಳನ್ನು ನೀಡಬೇಕು ಎಂದು ಎಲ್ಲ ಆಟಗಾರರಿಗೂ ಶಿಫಾರಸು ಮಾಡಲಾಗಿತ್ತು” ಎಂದು ಬಿಸಿಸಿಐ ಹೇಳಿದೆ.

ಇಶಾನ್ ಕಿಶನ್ ದಕ್ಷಿಣ ಆಫ್ರಿಕಾ ಪ್ರವಾಸವನ್ನು ತೊರೆದಾಗ, ಡಿಸೆಂಬರ್ 17ರಂದು ಬಿಸಿಸಿಐ ಹೀಗೆ ಹೇಳಿತ್ತು: “ವೈಯಕ್ತಿಕ ಕಾರಣಗಳಿಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ಟೆಸ್ಟ್ ಪ್ರವಾಸದಿಂದ ನನ್ನನ್ನು ಕೈಬಿಡಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಹೀಗಾಗಿ ಇದರ ಬೆನ್ನಿಗೇ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ”.

ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಅವಧಿಯಲ್ಲಿ ಇಶಾನ್ ಕಿಶಾನ್ ದೇಶೀಯ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬಿಸಿಸಿಐ ನಿರೀಕ್ಷಿಸಿತ್ತು. ಆದರೆ, ವಿಕೆಟ್ ಬ್ಯಾಟರ್ ಇಶಾನ್ ಕಿಶಾನ್ ರಣಜಿ ಟ್ರೋಫಿ ಪಂದ್ಯಗಳಲ್ಲಿ ತಮ್ಮ ತವರು ತಂಡವಾದ ಜಾರ್ಖಂಡ್ ಅನ್ನು ಪ್ರತಿನಿಧಿಸದೆ ದೂರ ಉಳಿದಿದ್ದರು. ಭಾರತೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಇಶಾನ್ ಕಿಶಾನ್ ಕೆಲವು ಪಂದ್ಯಗಳಲ್ಲಿ ಆಡಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ಸ್ಪಷ್ಟವಾಗಿ ಹೇಳಿದರೂ, ಇಶಾನ್ ಕಿಶಾನ್ ಅವರ ಸೂಚನೆಯನ್ನು ನಿರ್ಲಕ್ಷಿಸಿದ್ದರು.

ವಾಸ್ತವವಾಗಿ, ಮಂಗಳವಾರ ನಡೆದ ಡಿವೈ ಪಾಟೀಲ್ ಟಿ20 ಕಪ್ ನಲ್ಲಷ್ಟೆ ಅವರು ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಿದ್ದರು.

ಕೇಂದ್ರೀಕೃತ ಗುತ್ತಿಗೆಯಲ್ಲಿರುವ ಆಟಗಾರರು ರಾಷ್ಟ್ರೀಯ ತಂಡದ ಪರ ಆಡದೆ ಇರುವಾಗ ಕೆಂಪು ಚೆಂಡಿನ ಕ್ರಿಕೆಟ್ ಆಡುವುದು ಕಡ್ಡಾಯ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡಾ ಹೇಳಿದ್ದರು.

ಶ್ರೇಯಸ್ ಅಯ್ಯರ್ ಪ್ರಕರಣ

ಮಧ್ಯ‍ಮ ಕ್ರಮಾಂಕದ ಬ್ಯಾಟರ್ ಶ್ರ ಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಪಂದ್ಯಗಳಿಂದ ಕೈಬಿಡಲಾಗಿತ್ತು. “ಒಂದು ವೇಳೆ ಗಾಯದ ಕಾರಣಕ್ಕೆ ಶ್ರೇಯಸ್ ಅಯ್ಯರ್ ಗೆ ವಿರಾಮ ನೀಡಬೇಕಿದ್ದರೆ, ಬಿಸಿಸಿಐ ವೈದ್ಯಕೀಯ ವಾರ್ತಾಪತ್ರವು ಈ ಕುರಿತು ಮಾಹಿತಿಯನ್ನು ನೀಡಬೇಕಿತ್ತು. ಆದರೆ, ಯಾವುದೇ ಮಾಹಿತಿ ಇಲ್ಲದೆ ಇರುವುದರಿಂದ ಅವರನ್ನು ಕೈಬಿಡಲಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು” ಎಂದು ಮೂಲವೊಂದು PTI ಸುದ್ದಿ ಸಂಸ್ಥೆಗೆ ತಿಳಿಸಿದೆ.

ಗಾಯಗೊಂಡಿರುವುದರಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮುಂಬೈ ತಂಡದ ಪರ ಲಭ್ಯವಿಲ್ಲ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದರಾದರೂ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು ಅವರಿಗೆ ಯಾವುದೇ ಹೊಸ ಗಾಯಗಳಾಗಿಲ್ಲ ಎಂದು ಹೇಳಿತ್ತು ಎಂದು Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರೀಡಾ ವಿಜ್ಞಾನ ಮತ್ತು ಔಷಧ ವಿಭಾಗದ ಮುಖ್ಯಸ್ಥರಾಗಿರುವ ನಿತಿನ್ ಪಟೇಲ್ ಅವರ ಈಮೇಲ್ ಅನ್ನು ಉಲ್ಲೇಖಿಸಿರುವ ಈ ವರದಿಯು, ಶ್ರೇಯಸ್ ಅಯ್ಯರ್ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದರು ಎಂದು ಹೇಳಿದೆ. ಬರೋಡಾ ಎದುರಿನ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯವನ್ನು ತಪ್ಪಿಸಿಕೊಳ್ಳಲು ಬೆನ್ನು ನೋವು ಕಾರಣ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಮುಂಬೈ ಕ್ರಿಕೆಟ್ ಒಕ್ಕೂಟವು ಹೇಳಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ.

“ಇಂಗ್ಲೆಂಡ್ ತಂಡದ ವಿರುದ್ಧದ ಎರಡನೆ ಟೆಸ್ಟ್ ಪಂದ್ಯ ಮುಕ್ತಾಯಗೊಂಡ ನಂತರ ಶ್ರೇಯಸ್ ಅಯ್ಯರ್ ಆರೋಗ್ಯವಾಗಿದ್ದಾರೆ ಹಾಗೂ ಆಯ್ಕೆಗೆ ಲಭ್ಯರಿದ್ದಾರೆ ಎಂಬ ವರದಿಯನ್ನು ಭಾರತ ತಂಡಕ್ಕೆ ಹಸ್ತಾಂತರಿಸಲಾಗಿತ್ತು. ಭಾರತ ತಂಡದಿಂದ ನಿರ್ಗಮಿಸಿದ ನಂತರ ಯಾವುದೇ ಗಾಯಗಳೂ ವರದಿಯಾಗಿರಲಿಲ್ಲ” ಎಂದು ಪಟೇಲ್ ತಮ್ಮ ಈಮೇಲ್ ನಲ್ಲಿ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಇಬ್ಬರು ತಾರಾ ಆಟಗಾರರನ್ನು ತನ್ನ ಗುತ್ತಿಗೆ ಪಟ್ಟಿಯಿಂದ ಕೈಬಿಡುವ ಮೂಲಕ, ರಾಷ್ಟ್ರೀಯ ತಂಡದಲ್ಲಿ ಆಡುವ ಬಯಕೆ ಹೊಂದಿರುವ ಎಲ್ಲ ಆಟಗಾರರಿಗೂ ಬಿಸಿಸಿಐ ಕಠಿಣ ಸಂದೇಶ ರವಾನಿಸಿದೆ ಎಂದು ಭಾವಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News