ಚೆನ್ನೈನಲ್ಲಿ ನ್ಯೂಝಿಲ್ಯಾಂಡ್ ಗೆಲುವಿನ ಓಟಕ್ಕೆ, ಕಡಿವಾಣ ಹಾಕುವುದೇ ಅಫ್ಘಾನಿಸ್ತಾನ?

Update: 2023-10-17 17:44 GMT

Photo: cricketworldcup.com

ಚೆನ್ನೈ: ಎರಡು ದಿನಗಳ ಹಿಂದೆಯಷ್ಟೇ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ 69 ರನ್‌ನಿಂದ ಅಚ್ಚರಿ ಗೆಲುವು ದಾಖಲಿಸಿದ್ದ ಅಫ್ಘಾನಿಸ್ತಾನ ತಂಡ ಇದೀಗ ನವೋಲ್ಲಾಸದಲ್ಲಿದೆ. ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ನ್ಯೂಝಿಲ್ಯಾಂಡ್ ತಂಡ ಬುಧವಾರ ಎದುರಾಳಿಯಾಗಿರುವ ಅಫ್ಘಾನ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಆಡಿದ ಮೂರು ಪಂದ್ಯಗಳಲ್ಲಿ ಜಯ ಗಳಿಸಿರುವ ಕಿವೀಸ್ ತಂಡ ಯಶಸ್ಸಿನ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. ಇನ್ನೊಂದೆಡೆ ರವಿವಾರ ದಿಲ್ಲಿಯಲ್ಲಿ ಇಂಗ್ಲೆಂಡ್ ಮೇಲೆ ಸವಾರಿ ಮಾಡಿದ್ದ ಅಫ್ಘಾನಿಸ್ತಾನ ತಂಡ ಮತ್ತೊಂದು ಅನಿರೀಕ್ಷಿತ ಫಲಿತಾಂಶದ ನಿರೀಕ್ಷೆಯಲ್ಲಿದೆ. ಅಫ್ಘಾನಿಸ್ತಾನ ತಂಡ ಆಂಗ್ಲರ ವಿರುದ್ಧ ಪಂದ್ಯಕ್ಕೆ ಮೊದಲು ಬಾಂಗ್ಲಾದೇಶ ಹಾಗೂ ಭಾರತದ ಎದುರು ಸೋಲನುಭವಿಸಿತ್ತು. ಆದರೆ ದಿಲ್ಲಿಯ ಜಯ ಕಳೆಗುಂದಿದ ಅದರ ವರ್ಚಸ್ಸನ್ನು ಹೆಚ್ಚಿಸಿದೆ.

ಕೇನ್ ವಿಲಿಯಮ್ಸನ್ ಪುನರಾಗಮನ ಪಂದ್ಯದಲ್ಲೇ ಗಾಯಾಳುವಾಗಿರುವ ಕಾರಣ ಟಾಮ್ ಲ್ಯಾಥಮ್ ನ್ಯೂಝಿಲ್ಯಾಂಡ್ ತಂಡವನ್ನು ಮತ್ತೆ ಮುನ್ನಡೆಸಲಿದ್ದಾರೆ. ಬಾಂಗ್ಲಾ ವಿರುದ್ಧ ಪಂದ್ಯದ ವೇಳೆ ರನ್‌ಗಾಗಿ ಓಡುವಾಗ ಫೀಲ್ಡರ್ ಎಸೆದ ಚೆಂಡು ವಿಲಿಯಮ್ಸನ್ ಅವರ ಎಡ ಹೆಬ್ಬೆರಳಿನ ಮೂಳೆಗೆ ತಾಗಿ ಪೆಟ್ಟಾಗಿತ್ತು. ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ವಿಲಿಯಮ್ಸನ್ ಇನ್ನೂ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ನ್ಯೂಝಿಲ್ಯಾಂಡ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಬ್ಯಾಟರ್‌ಗಳಾದ ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಡೆವೊನ್ ಕಾನ್ವೇ ಜೊತೆಗೆ ಆಲ್‌ರೌಂಡರ್ ರಚಿನ್ ರವೀಂದ್ರ ಅವರ ಪ್ರದರ್ಶನ ಕುತೂಹಲಕ್ಕೆ ಎಡೆ ಮಾಡಿದೆ. ರಚಿನ್ ಈ ಬಾರಿ ತಲಾ ಒಂದು ಶತಕ ಹಾಗೂ ಅರ್ಧಶತಕ ಗಳಿಸಿದ್ದಾರೆ.

ರಶೀದ್ ಖಾನ್, ಮುಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಅವರ ಸ್ಪಿನ್ ಜಾಲಕ್ಕೆ ಇಂಗ್ಲೆಂಡ್ ಬ್ಯಾಟರ್‌ಗಳು ದಿಲ್ಲಿಯಲ್ಲಿ ಪರದಾಟ ನಡೆಸಿದ್ದರು. ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳಿಗೆ ನೆರವಾಗುವ ಚೆಪಾಕ್ ಪಿಚ್‌ನಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ನ್ಯೂಝಿಲ್ಯಾಂಡ್ ಎಚ್ಚರಿಕೆ ವಹಿಸಬೇಕಾಗಿದೆ.

ಅಫ್ಘಾನಿಸ್ತಾನದ ಬ್ಯಾಟರ್‌ಗಳ ಪೈಕಿ ರಹಮಾನುಲ್ಲಾ ಗುರ್ಬಾಜ್ ಉತ್ತಮ ಲಯದಲ್ಲಿದ್ದು ಎರಡು ಅರ್ಧಶತಕ ಗಳಿಸಿದ್ದಾರೆ. ನಾಯಕ ಹಶ್ಮತುಲ್ಲಾ ಶಾಹಿದಿ, ಅಝ್ಮತುಲ್ಲಾ ಒಮರ್ಝೈ ಹಾಗೂ ಇಕ್ರಮ್ ಅಲಿ ಖಿಲ್ ಉಪಯುಕ್ತ ಇನಿಂಗ್ಸ್ ಆಡಬಲ್ಲರೆಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ.

ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಅವರನ್ನೊಳಗೊಂಡ ನ್ಯೂಝಿಲ್ಯಾಂಡ್‌ನ ವೇಗದ ಬೌಲಿಂಗ್ ದಾಳಿ ಪ್ರಬಲವಾಗಿದೆ. ಹೆಬ್ಬೆರಳ ಗಾಯದಿಂದ ಚೇತರಿಸಿಕೊಂಡಿರುವ ಮಧ್ಯಮ ವೇಗಿ ಟಿಮ್ ಸೌಥಿ ಈ ಪಂದ್ಯಕ್ಕೆ ಅವಕಾಶ ಪಡೆಯುತ್ತಾರೆಯೇ ಎಂಬ ಕುತೂಹಲ ಇದೆ. ಸ್ಪಿನ್‌ ದ್ವಯರಾದ ರಚಿನ್ ರವೀಂದ್ರ ಹಾಗೂ ಸ್ಯಾಂಟ್ನರ್ ಅವರನ್ನು ಅಫ್ಘಾನ್ ಬ್ಯಾಟರ್‌ಗಳು ಹೇಗೆ ಎದುರಿಸಬಲ್ಲರು ಎಂಬುದು ಕುತೂಲಹಕರ. ಸ್ಯಾಂಟ್ನರ್ ಪ್ರಸಕ್ತ ವಿಶ್ವಕಪ್‌ನಲ್ಲಿ ಒಟ್ಟು 8 ವಿಕೆಟ್‌ಗಳನ್ನು ಪಡೆದಿದ್ದಾರೆ.

ಉಭಯ ತಂಡಗಳು ಈ ತನಕ 2015 ಹಾಗೂ 2019ರ ವಿಶ್ವಕಪ್ ಪಂದ್ಯದಲ್ಲಿ ಎರಡು ಬಾರಿಯಷ್ಟೇ ಮುಖಾಮುಖಿಯಾಗಿವೆ. ಎರಡೂ ಸಂದರ್ಭದಲ್ಲಿ ನ್ಯೂಝಿಲ್ಯಾಂಡ್ ಸುಲಭ ಜಯ ದಾಖಲಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News