ವಿಂಬಲ್ಡನ್: ಜೊಕೊವಿಕ್‌ಗೆ ಸೋಲುಣಿಸಿ ಚೊಚ್ಚಲ ಪ್ರಶಸ್ತಿ ಜಯಿಸಿದ ಕಾರ್ಲೊಸ್ ಅಲ್ಕರಾಝ್

Update: 2023-07-16 18:04 GMT

Photo: Twitter/@Wimbledon

ಲಂಡನ್, ಜು.16: ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್‌ರನ್ನು ಐದು ಸೆಟ್‌ಗಳ ಪೈಪೋಟಿಯಲ್ಲಿ ರೋಚಕವಾಗಿ ಮಣಿಸಿದ ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್ ಅಲ್ಕರಾಝ್ ಮೊದಲ ಬಾರಿ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ರವಿವಾರ ನಡೆದ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅಲ್ಕರಾಝ್ ಅವರು ಜೊಕೊವಿಕ್‌ರನ್ನು 1-6, 7-6(6), 6-1, 4-6, 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಇದೇ ಮೊದಲ ಬಾರಿ ವಿಂಬಲ್ಡನ್ ಫೈನಲ್‌ನಲ್ಲಿ ಆಡಿದ 21ರ ಹರೆಯದ ಅಲ್ಕರಾಝ್ ಅವರು ಬೋರಿಸ್ ಬೆಕೆರ್ ಹಾಗೂ ಬೋರ್ನ್ ಬೋರ್ಗ್ ನಂತರ ವಿಂಬಲ್ಡನ್ ಪ್ರಶಸ್ತಿ ಜಯಿಸಿದ ಮೂರನೇ ಕಿರಿಯ ಆಟಗಾರನಾಗಿದ್ದಾರೆ.

ಜೊಕೊವಿಕ್ ಮೊದಲ ಸೆಟನ್ನು 6-1 ಅಂತರದಿಂದ ಗೆದ್ದುಕೊಂಡು ಶುಭಾರಂಭ ಮಾಡಿದರು. ಆದರೆ 2ನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಅಲ್ಕರಾಝ್ ಟೈ-ಬ್ರೇಕರ್‌ನಲ್ಲಿ 7-6(6), ಅಂತರದಿಂದ ಜಯ ಸಾಧಿಸಿ 1-1ರಿಂದ ಸಮಬಲಗೊಳಿಸಿ ಪಂದ್ಯವನ್ನು 3ನೇ ಸೆಟ್‌ಗೆ ಕೊಂಡೊಯ್ದರು. 3ನೇ ಸೆಟ್‌ನಲ್ಲಿ ಅಲ್ಕರಾಝ್ 6-1 ಅಂತರದಿಂದ ಜಯ ಸಾಧಿಸಿ 2-1 ಮುನ್ನಡೆ ಸಾಧಿಸಿದರು. 4ನೇ ಸೆಟ್‌ನಲ್ಲಿ 6-3 ಅಂತರದಿಂದ ಜಯ ಸಾಧಿಸಿದ ಜೊಕೊವಿಕ್ ಪಂದ್ಯವನ್ನು ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ 5ನೇ ಸೆಟ್‌ನಲ್ಲಿ 6-4 ಅಂತರದಿಂದ ಜಯಭೇರಿ ಬಾರಿಸಿದ ಅಲ್ಕರಾಝ್ ಪ್ರಶಸ್ತಿ ಬಾಚಿಕೊಂಡರು.

ಈ ಸೋಲಿನೊಂದಿಗೆ 24ನೇ ಗ್ರಾನ್ ಸ್ಲಾಮ್ ಪ್ರಶಸ್ತಿ ಜಯಿಸುವ ಜೊಕೊವಿಕ್ ಪ್ರಯತ್ನ ವಿಫಲವಾಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News