ವಿಂಬಲ್ಡನ್ ಚಾಂಪಿಯನ್ಶಿಪ್: ಮಾಜಿ ಚಾಂಪಿಯನ್ ಪೆಟ್ರಾ ಕ್ವಿಟೋವಾ ಮೂರನೇ ಸುತ್ತಿಗೆ ಲಗ್ಗೆ
ಲಂಡನ್: ಎರಡು ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾ ಬೆಲಾರುಸ್ ಆಟಗಾರ್ತಿ ಅಲಿಯಾಕ್ಸಾಂದ್ರಾ ಸಾಸ್ನೋವಿಚ್ರನ್ನು ಸೋಲಿಸಿ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಮೂರನೇ ಸುತ್ತಿಗೆ ತಲುಪಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ನ 2ನೇ ಸುತ್ತಿನ ಪಂದ್ಯದಲ್ಲಿ ಝೆಕ್ ಗಣರಾಜ್ಯದ ಕ್ವಿಟೋವಾ ಅವರು ಅಲಿಯಾಕ್ಸಾಂದ್ರಾರನ್ನು 6-2, 6-2 ನೇರ ಸೆಟ್ಗಳ ಅಂತರದಿಂದ ಮಣಿಸಿದರು. 33ರ ಹರೆಯದ ಕ್ವಿಟೋವಾ ತನ್ನೆಲ್ಲ ಅನುಭವ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದರು. ಎದುರಾಳಿ ಕಠಿಣ ಹೋರಾಟ ನೀಡುವಲ್ಲಿ ವಿಫಲರಾದರು.
ಕ್ವಿಟೋವಾ ಈ ಹಿಂದೆ 2011 ಹಾಗೂ 2014ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು. 2014ರಲ್ಲಿ ಪ್ರಶಸ್ತಿ ಜಯಿಸಿದ ನಂತರ ಕೇವಲ ಒಂದು ಸಲ ಮೂರನೇ ಸುತ್ತು ತಲುಪಿದ್ದರು. ಬೆಲಾರುಸ್ ಆಟಗಾರ್ತಿ ಸಾಕಷ್ಟು ತಪ್ಪೆಸಗಿದರು. ತನ್ನ ಲಯವನ್ನು ಕಂಡುಕೊಳ್ಳಲು ವಿಫಲರಾದರು.
ಬರ್ಲಿನ್ನಲ್ಲಿ ಹುಲ್ಲುಹಾಸಿನ ಅಂಗಣದಲ್ಲಿ ಪ್ರಶಸ್ತಿ ಜಯಿಸಿ ವಿಂಬಲ್ಡನ್ಗೆ ಉತ್ತಮ ತಯಾರಿ ನಡೆಸಿದ್ದ ಕ್ವಿಟೋವಾ ಮೊದಲ ಸೆಟ್ನಲ್ಲಿ 4-2 ಮುನ್ನಡೆ ಸಾಧಿಸಿ ಮೇಲುಗೈ ಸಾಧಿಸಿದರು. ಕೇವಲ 74 ನಿಮಿಷಗಳ ಹೋರಾಟದಲ್ಲಿ 2 ಸೆಟ್ ಅಂತರದಿಂದ ಗೆಲುವು ದಾಖಲಿಸಿದರು. ಎದುರಾಳಿ ಸ್ಪೇನ್ನ ಪೌಲಾ ಬಡೋಸಾ ಪಂದ್ಯದಿಂದ ಹಿಂದೆ ಸರಿದ ಕಾರಣ ಉಕ್ರೇನ್ ಆಟಗಾರ್ತಿ ಮಾರ್ಟಾ ಕೋಸ್ಟ್ಯುಕ್ ಮೊದಲ ಬಾರಿ ಚಾಂಪಿಯನ್ಶಿಪ್ನಲ್ಲಿ 3ನೇ ಸುತ್ತು ಪ್ರವೇಶಿಸಿದರು. ಬೆನ್ನುನೋವಿನಿಂದಾಗಿ ಬಡೋಸಾ ಪಂದ್ಯದಿಂದ ಹಿಂದೆ ಸರಿಯುವಾಗ 21ರ ಹರೆಯದ ಕೋಸ್ಟ್ಯುಕ್ 6-2, 1-0 ಮುನ್ನಡೆಯಲ್ಲಿದ್ದರು.