6 ಪದಕ ಗೆದ್ದರೂ ಚಿನ್ನ ಇಲ್ಲ | ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಳಿಸಿದ ಭಾರತ

Update: 2024-08-11 15:21 GMT

PC : olympics.com

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟು 6 ಪದಕಗಳನ್ನು ಜಯಿಸಿ ತನ್ನ ಅಭಿಯಾನ ಅಂತ್ಯಗೊಳಿಸಿದ್ದು ಒಂದೇ ಆವೃತ್ತಿಯ ಬೇಸಿಗೆ ಗೇಮ್ಸ್‌ನಲ್ಲಿ ಎರಡನೇ ಜಂಟಿ ಶ್ರೇಷ್ಠ ಪ್ರದರ್ಶನ ನೀಡಿದೆ. ಈ ಸಾಧನೆಯ ಮೂಲಕ ಭಾರತವು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 41 ಪದಕಗಳನ್ನು ಗೆದ್ದುಕೊಂಡಿದೆ.

ಒಂದು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿರುವ ಭಾರತವು ಟೋಕಿಯೊ-2020ರ ಒಲಿಂಪಿಕ್ಸ್‌ಗಿಂತ ಒಂದು ಪದಕ ಕಡಿಮೆ ಗೆದ್ದುಕೊಂಡಿದೆ. 3 ವರ್ಷಗಳ ಹಿಂದೆ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 7 ಪದಕ ಗೆದ್ದುಕೊಂಡಿತ್ತು. ಇದು ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಭಾರತವು ಒಟ್ಟು 6 ಪದಕಗಳನ್ನು ಜಯಿಸಿದ್ದು, ಇದೀಗ ಜಂಟಿ ಶ್ರೇಷ್ಠ ಪ್ರದರ್ಶನ ನೀಡಿದಂತಾಗಿದೆ.

ಇದೇ ಮೊದಲ ಬಾರಿ ಪದಕ ಗಳಿಕೆಯಲ್ಲಿ ಎರಡಂಕೆ ದಾಟುವ ನಿರೀಕ್ಷೆಯಲ್ಲಿ ಭಾರತವು ಈ ಬಾರಿಯ ಒಲಿಂಪಿಕ್ಸ್‌ಗೆ ಅತ್ಯಂತ ಹೆಚ್ಚು 117 ಅಥ್ಲೀಟ್‌ಗಳನ್ನು ಪ್ಯಾರಿಸ್‌ ಗೆ ಕಳುಹಿಸಿಕೊಟ್ಟಿತ್ತು.

ಸ್ಪರ್ಧಾವಳಿಯ 2ನೇ ದಿನವಾದ ಜುಲೈ 28ರಂದು ಶೂಟರ್ ಮನು ಭಾಕರ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಭಾರತವು ಉತ್ತಮ ಆರಂಭ ಪಡೆದಿತ್ತು. ಎರಡು ದಿನಗಳ ನಂತರ ಜುಲೈ 30ರಂದು 10 ಮೀ. ಏರ್ ಪಿಸ್ತೂಲ್ ಮಿಶ್ರ ಟೀಮ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಮತ್ತೊಂದು ಕಂಚು ಜಯಿಸಿದ ಮನು ಭಾಕರ್ ಅವರು ಸ್ವಾತಂತ್ರ್ಯ ನಂತರ ಒಂದೇ ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಜಯಿಸಿದ ಮೊದಲ ಭಾರತೀಯರೆಂಬ ಹಿರಿಮೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದರು.

ಸ್ವಪ್ನಿಲ್ ಕುಸಾಲೆ ಅವರು ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಾರಿ ಪದಕ ಗೆದ್ದುಕೊಟ್ಟಾಗ ಪದಕ ಗಳಿಕೆಯಲ್ಲಿ ಎರಡಂಕೆ ದಾಟುವ ವಿಶ್ವಾಸ ಹೆಚ್ಚಾಗಿತ್ತು. ಕುಸಾಲೆ ಆಗಸ್ಟ್ 1ರಂದು ಪುರುಷರ 50 ಮೀ. ರೈಫಲ್ ತ್ರಿ ಪೊಸಿಶನ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು. ರಿಯೋ ಹಾಗೂ ಟೋಕಿಯೊದಲ್ಲಿ ನಡೆದಿದ್ದ ಕಳೆದೆರಡು ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಶೂಟರ್‌ಗಳು ಈ ಬಾರಿ ಮೂರು ಪದಕಗಳನ್ನು ಜಯಿಸಿ ಮೊದಲಿನ ಲಯಕ್ಕೆ ಮರಳಿದ್ದರು.

ಆದರೆ ಭಾರತವು ಮುಂದಿನ 7 ದಿನಗಳ ಕಾಲ ಪದಕದ ಬರ ಎದುರಿಸಿತು. ಆಗ ಭಾರತದ ಪದಕ ಗಳಿಕೆಯಲ್ಲಿ ಎರಡಂಕೆಯನ್ನು ದಾಟುವ ವಿಶ್ವಾಸ ಕಮರಿಹೋಯಿತು. ಅಗ ಟೋಕಿಯೊ ಯಶಸ್ಸನ್ನು ಸರಿಗಟ್ಟುವ ಭರವಸೆಯೂ ಇಲ್ಲವಾಯಿತು.

ಕೊನೆಯ 5 ದಿನಗಳಲ್ಲಿ ಕೆಲವು ಪದಕದ ನಿರೀಕ್ಷೆಗಳು ಮೂಡಿದವು. ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಕಣದಲ್ಲಿದ್ದರು, ಹಾಕಿ ತಂಡ ಪದಕದ ಸ್ಪರ್ಧೆಯಲ್ಲಿತ್ತು. ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಕುಸ್ತಿಪಟುಗಳು ಸ್ಪರ್ಧೆಯಲ್ಲಿದ್ದರು.

ಸ್ಪರ್ಧಾವಳಿಯ 11ನೇ ದಿನವಾದ ಮಂಗಳವಾರ ವಿನೇಶ್ ಫೋಗಟ್ ಫೈನಲ್‌ಗೆ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡು ಭಾರತಕ್ಕೆ ಪದಕವನ್ನು ಖಚಿತಪಡಿಸಿದ್ದರು. ಆದರೆ ಮರು ದಿನ ಆಘಾತಕಾರಿ ಸುದ್ದಿಯೊಂದು ಅಪ್ಪಳಿಸಿತು. 50 ಕೆಜಿ ಫ್ರಿಸ್ಟೈಲ್ ಫೈನಲ್‌ಗೆ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ವಿನೇಶ್ ಅನರ್ಹಗೊಂಡರು. ಖಚಿತವಾಗಿದ್ದ ಪದಕವೊಂದು ಕೈತಪ್ಪಿಹೋದಾಗ ಭಾರತವು ಭಾರೀ ಹಿನ್ನಡೆ ಕಂಡಿತು. ಐಒಎ ಹಾಗೂ ಕುಸ್ತಿಪಟು ಫೋಗಟ್ ಬೆಳ್ಳಿ ಪದಕಕ್ಕಾಗಿ ಕ್ರೀಡಾ ನ್ಯಾಯ ಮಂಡಳಿಗೆ(ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದು, ಈ ಕುರಿತ ತೀರ್ಪು ಆಗಸ್ಟ್ 13ರಂದು ಹೊರಬರುವ ನಿರೀಕ್ಷೆ ಇದೆ.

ವಿನೇಶ್ ಫೈನಲ್‌ಗೆ ಅನರ್ಹಗೊಳ್ಳುವ ಮುನ್ನಾ ದಿನ ಭಾರತೀಯ ಪುರುಷರ ಹಾಕಿ ತಂಡವು ಜರ್ಮನಿ ವಿರುದ್ಧ ಸೆಮಿ ಫೈನಲ್‌ನಲ್ಲಿ ಸೋತಿತ್ತು. ಮತ್ತೊಮ್ಮೆ ಕಂಚಿನ ಪದಕಕ್ಕಾಗಿ ಆಡುವ ಅವಕಾಶ ಪಡೆದಿತ್ತು. ಪ್ಯಾರಿಸ್‌ ಗೆ ತೆರಳಿದ್ದ ಭಾರತದ ಏಕೈಕ ವೇಟ್‌ ಲಿಫ್ಟರ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸೈಖೋಮ್ ಮೀರಾಬಾಯಿ ಚಾನು 49 ಕೆಜಿ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದು ಭಾರತಕ್ಕೆ ಮತ್ತಷ್ಟು ನಿರಾಸೆ ತಂದರು.

ಆಗಸ್ಟ್ 8 ಭಾರತಕ್ಕೆ ಅತ್ಯಂತ ಮುಖ್ಯವಾಗಿತ್ತು. ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವ ವಿಶ್ವಾಸ ಮೂಡಿಸಿದ್ದ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಸ್ಪರ್ಧಿಸಿದರು.

ಜಾವೆಲಿನ್ ಫೈನಲ್‌ಗಿಂತ ಮೊದಲು ಭಾರತೀಯ ಹಾಕಿ ತಂಡವು ಸ್ಪೇನ್ ತಂಡವನ್ನು 2-1 ಅಂತರದಿಂದ ಮಣಿಸಿ ಗೇಮ್ಸ್‌ನಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದುಕೊಂಡಿತು. ಹಾಕಿ ತಂಡವು 52 ವರ್ಷಗಳಲ್ಲಿ ಮೊದಲ ಬಾರಿ ಸತತ ಎರಡು ಪದಕಗಳನ್ನು ಜಯಿಸಿದ ಸಾಧನೆ ಮಾಡಿತು.

ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಜಾವೆಲಿನ್ ಫೈನಲ್‌ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ತನ್ನ 2ನೇ ಪ್ರಯತ್ನದಲ್ಲಿ 92.97 ಮೀ.ದೂರಕ್ಕೆ ಜಾವೆಲಿನ್ ಎಸೆದು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಈ ವರ್ಷ ಶ್ರೇಷ್ಠ ಪ್ರದರ್ಶನ ನೀಡಿದರೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಆಗಸ್ಟ್ 8 ರಂದು ಎರಡು ಪದಕಗಳನ್ನು ಜಯಿಸಿದ ಭಾರತವು ಒಂದು ಬೆಳ್ಳಿ ಹಾಗೂ 4 ಕಂಚು ಸಹಿತ ಒಟ್ಟು 5 ಪದಕಗಳನ್ನು ಗೆದ್ದುಕೊಂಡಿತು.

ಅದೇ ದಿನ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ತನ್ನ ಸೆಮಿ ಫೈನಲ್ ಹೋರಾಟದಲ್ಲಿ ಸೋತಿದ್ದರು. ಆದರೆ ಮರುದಿನ ಕಂಚಿನ ಪದಕದ ಸುತ್ತಿನಲ್ಲಿ ಆಡುವ ಅವಕಾಶ ಪಡೆದರು. ಆಗಸ್ಟ್ 9ರಂದು ನಡೆದ ಪಂದ್ಯದಲ್ಲಿ ಕಂಚಿನ ಪದಕ ಜಯಿಸಿದ ಕಿರಿಯ ಕ್ರೀಡಾಪಟು ಎನಿಸಿಕೊಂಡ ಅಮನ್ ಅಮೋಘ ಸಾಧನೆ ಮಾಡಿದರು.

ಮಹಿಳಾ ಕುಸ್ತಿಪಟು ರಿತಿಕಾ ಹೂಡಾ ಪದಕ ಸ್ಪರ್ಧೆಯಿಂದ ಹೊರ ನಡೆಯುವ ಮೂಲಕ ಒಲಿಂಪಿಕ್ಸ್ ಮುಕ್ತಾಯದ ಮುನ್ನಾದಿನ ಶನಿವಾರವೇ ಭಾರತವು ತನ್ನ ಅಭಿಯಾನ ಅಂತ್ಯಗೊಳಿಸಿತು.

ಅಂತಿಮವಾಗಿ ಭಾರತವು ಒಂದು ಬೆಳ್ಳಿ ಹಾಗೂ 5 ಕಂಚು ಸಹಿತ ಒಟ್ಟು 6 ಪದಕಗಳನ್ನು ಜಯಿಸಿತು. ತನ್ನ ಆರಂಭಿಕ ಗುರಿಯಾಗಿದ್ದ ಎರಡಂಕೆ ದಾಟುವುದರಿಂದ ಹಿಂದುಳಿಯಿತು. ಟೋಕಿಯೊ ಗೇಮ್ಸ್ ಸಾಧನೆಯನ್ನು ಮೀರುವ ಅವಕಾಶವನ್ನು ಕಳೆದುಕೊಂಡಿತು.

►ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪದಕ ವಿಜೇತರ ಸಂಪೂರ್ಣ ಪಟ್ಟಿ ಇಂತಿದೆ.

►ಸ್ವಾತಂತ್ರ್ಯ ಪೂರ್ವ

ಬೆಳ್ಳಿ-ನಾರ್ಮನ್ ಪ್ರಿಚರ್ಡ್-1900 ಪ್ಯಾರಿಸ್-ಪುರುಷರ 200 ಮೀ.

ಬೆಳ್ಳಿ-ನಾರ್ಮನ್ ಪ್ರಿಚರ್ಡ್-1900 ಪ್ಯಾರಿಸ್-ಪುರುಷರ 200 ಮೀ.

ಚಿನ್ನ-ಪುರುಷರ ಹಾಕಿ ತಂಡ-1928 ಆಮ್‌ಸ್ಟರ್‌ಡಮ್-ಪುರುಷರ ಫೀಲ್ಡ್ ಹಾಕಿ

ಚಿನ್ನ-ಪುರುಷರ ಹಾಕಿ ತಂಡ-1932 ಲಾಸ್ ಏಂಜಲಿಸ್-ಪುರುಷರ ಫೀಲ್ಡ್ ಹಾಕಿ

ಚಿನ್ನ- ಪುರುಷರ ಹಾಕಿ ತಂಡ-1936 ಬರ್ಲಿನ್-ಪುರುಷರ ಫೀಲ್ಡ್ ಹಾಕಿ

►ಸ್ವಾತಂತ್ರ್ಯ ನಂತರ

ಚಿನ್ನ-ಪುರುಷರ ಹಾಕಿ ತಂಡ-1948 ಲಂಡನ್-ಪುರುಷರ ಫೀಲ್ಡ್ ಹಾಕಿ

ಚಿನ್ನ-ಪುರುಷರ ಹಾಕಿ ತಂಡ-1952 ಹೆಲ್ಸಿಂಕಿ- ಪುರುಷರ ಫೀಲ್ಡ್ ಹಾಕಿ

ಕಂಚು-ಕೆ.ಡಿ. ಜಾಧವ್-1952 ಹೆಲ್ಸಿಂಕಿ-ಕುಸ್ತಿ ಪುರುಷರ ಫ್ರ್ರೀಸ್ಟೈಲ್ 57ಕೆಜಿ

ಚಿನ್ನ-ಪುರುಷರ ಹಾಕಿ ತಂಡ-1956 ಮೆಲ್ಬರ್ನ್-ಪುರುಷರ ಫೀಲ್ಡ್ ಹಾಕಿ

ಬೆಳ್ಳಿ-ಪುರುಷರ ಹಾಕಿ ತಂಡ-1960 ರೋಮ್-ಪುರುಷರ ಫೀಲ್ಡ್ ಹಾಕಿ

ಚಿನ್ನ-ಪುರುಷರ ಹಾಕಿ ತಂಡ-1964 ಟೋಕಿಯೊ-ಪುರುಷರ ಫೀಲ್ಡ್ ಹಾಕಿ

ಕಂಚು-ಪುರುಷರ ಹಾಕಿ ತಂಡ-1968 ಮೆಕ್ಸಿಕೊ ಸಿಟಿ-ಪುರುಷರ ಫೀಲ್ಡ್ ಹಾಕಿ

ಕಂಚು-ಪುರುಷರ ಹಾಕಿ ತಂಡ-1972 ಮ್ಯೂನಿಚ್-ಪುರುಷರ ಫೀಲ್ಡ್ ಹಾಕಿ

ಚಿನ್ನ-ಪುರುಷರ ಹಾಕಿ ತಂಡ-1980 ಮಾಸ್ಕೊ-ಪುರುಷರ ಫೀಲ್ಡ್ ಹಾಕಿ

ಕಂಚು-ಲಿಯಾಂಡರ್ ಪೇಸ್-1996 ಅಟ್ಲಾಂಟ-ಟೆನಿಸ್ ಪುರುಷರ ಸಿಂಗಲ್ಸ್

ಕಂಚು-ಕರ್ಮಾನ್ ಮಲ್ಲೇಶ್ವರಿ-2000 ಸಿಡ್ನಿ-ಮಹಿಳೆಯರ 69 ಕೆಜಿ ವೇಟ್‌ಲಿಫ್ಟಿಂಗ್

ಬೆಳ್ಳಿ-ರಾಜ್ಯವರ್ಧನ್ ಸಿಂಗ್ ರಾಥೋರ್-2004 ಅಥೆನ್ಸ್-ಶೂಟಿಂಗ್ ಪುರುಷರ ಡಬಲ್ ಟ್ರ್ಯಾಪ್

ಚಿನ್ನ-ಅಭಿನವ್ ಬಿಂದ್ರಾ-2008 ಬೀಜಿಂಗ್-ಶೂಟಿಂಗ್ ಪುರುಷರ 10 ಮೀ. ಏರ್ ರೈಫಲ್

ಕಂಚು-ವಿಜೇಂದರ್ ಸಿಂಗ್-2008 ಬೀಜಿಂಗ್-ಬಾಕ್ಸಿಂಗ್ ಪುರುಷರ ಮಿಡ್ಲ್‌ವೇಟ್

ಕಂಚು-ಸುಶೀಲ್ ಕುಮಾರ್-2008 ಬೀಜಿಂಗ್-ಕುಸ್ತಿ ಪುರುಷರ 66 ಕೆಜಿ ಫ್ರೀಸ್ಟೈಲ್

ಬೆಳ್ಳಿ-ವಿಜಯಕುಮಾರ್-2012 ಲಂಡನ್-ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್

ಬೆಳ್ಳಿ-ಸುಶೀಲ್ ಕುಮಾರ್-2012 ಲಂಡನ್-ಕುಸ್ತಿ ಪುರುಷರ 66 ಕೆಜಿ ಫ್ರೀಸ್ಟೈಲ್

ಕಂಚು-ಸೈನಾ ನೆಹ್ವಾಲ್-2012 ಲಂಡನ್-ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್

ಕಂಚು-ಮೇರಿ ಕೋಮ್-2012 ಲಂಡನ್-ಬಾಕ್ಸಿಂಗ್ ಮಹಿಳೆಯರ ಫ್ಲೈವೇಟ್

ಕಂಚು-ಗಗನ್ ನಾರಂಗ್-2012 ಲಂಡನ್-ಶೂಟಿಂಗ್ ಪುರುಷರ 10 ಮೀ. ಏರ್ ರೈಫಲ್

ಕಂಚು-ಯೋಗೇಶ್ವರ ದತ್ತ-2012 ಲಂಡನ್-ಕುಸ್ತಿ ಪುರುಷರ 60 ಕೆಜಿ ಫ್ರೀಸ್ಟೈಲ್

ಬೆಳ್ಳಿ-ಪಿ.ವಿ. ಸಿಂಧು-2016 ರಿಯೊ ಡಿ ಜನೈರೊ-ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್

ಕಂಚು-ಸಾಕ್ಷಿ ಮಲಿಕ್-2016 ರಿಯೊ ಡಿ ಜನೈರೊ-ಕುಸ್ತಿ ಮಹಿಳೆಯರ 58 ಕೆಜಿ ಫ್ರೀಸ್ಟೈಲ್

ಚಿನ್ನ-ನೀರಜ್ ಚೋಪ್ರಾ-2020 ಟೋಕಿಯೊ-ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ

ಬೆಳ್ಳಿ-ಮೀರಾಬಾಯಿ ಚಾನು-2020 ಟೋಕಿಯೊ-ವೇಟ್‌ಲಿಫ್ಟಿಂಗ್ ಮಹಿಳೆಯರ 49 ಕೆಜಿ

ಬೆಳ್ಳಿ-ರವಿ ಕುಮಾರ್ ದಹಿಯಾ-2020 ಟೋಕಿಯೊ-ಕುಸ್ತಿ ಪುರುಷರ 57 ಕೆಜಿ ಫ್ರೀಸ್ಟೈಲ್

ಕಂಚು-ಪಿ.ವಿ. ಸಿಂಧು-2020 ಟೋಕಿಯೊ-ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್

ಕಂಚು-ಲವ್ಲೀನಾ ಬೊರ್ಗೊಹೈನ್-2020 ಟೋಕಿಯೊ-ಬಾಕ್ಸಿಂಗ್ ಮಹಿಳೆಯರ ವೆಲ್ಟರ್‌ವೇಟ್

ಕಂಚು-ಪುರುಷರ ಹಾಕಿ ತಂಡ-2020 ಟೋಕಿಯೊ-ಪುರುಷರ ಫೀಲ್ಡ್ ಹಾಕಿ

ಕಂಚು-ಬಜರಂಗ್ ಪುನಿಯಾ-2020 ಟೋಕಿಯೊ-ಕುಸ್ತಿ ಪುರುಷರ 65 ಕೆಜಿ ಫ್ರೀಸ್ಟೈಲ್

ಬೆಳ್ಳಿ-ನೀರಜ್ ಚೋಪ್ರಾ-2024 ಪ್ಯಾರಿಸ್-ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ

ಕಂಚು-ಮನು ಭಾಕರ್-2024 ಪ್ಯಾರಿಸ್-ಶೂಟಿಂಗ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್

ಕಂಚು-ಮನು ಭಾಕರ್-2024 ಪ್ಯಾರಿಸ್-ಶೂಟಿಂಗ್ 10ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್

ಕಂಚು-ಸರಬ್ಜೋತ್ ಸಿಂಗ್-2024 ಪ್ಯಾರಿಸ್-ಶೂಟಿಂಗ್ 10ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್

ಕಂಚು- ಸ್ವಪ್ನಿಲ್ ಕುಸಾಲೆ-2024 ಪ್ಯಾರಿಸ್-ಶೂಟಿಂಗ್ ಪುರುಷರ 50 ಮೀ.ರೈಫಲ್ 3ಪೊಸಿಶನ್ಸ್

ಕಂಚು-ಪುರುಷರ ಹಾಕಿ ತಂಡ-2024 ಪ್ಯಾರಿಸ್-ಪುರುಷರ ಹಾಕಿ ತಂಡ

ಕಂಚು-ಅಮನ್ ಸೆಹ್ರಾವತ್-2024 ಪ್ಯಾರಿಸ್-ಕುಸ್ತಿ ಪುರುಷರ 57 ಕೆಜಿ ಫ್ರೀಸ್ಟೈಲ್

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News