ಪ್ರಧಾನಿ ನಿವಾಸದ ಬಳಿ ಪದ್ಮಶ್ರೀ ಪ್ರಶಸ್ತಿ ತೊರೆದ ಕುಸ್ತಿಪಟು ಬಜರಂಗ್ ಪುನಿಯಾ

Update: 2023-12-22 17:56 GMT

Photo : twitter

ಹೊಸದಿಲ್ಲಿ: ಲೈಂಗಿಕ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರನ್ನು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರನ್ನಾಗಿ ನೇಮಿಸಿದ ನಂತರ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಅವರು ತಮಗೆ ಲಭಿಸಿದ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ಮೋದಿ ನಿವಾಸವಿರುಚ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ತೊರೆದು ಹೋಗಿದ್ದಾರೆ.

ಪದ್ಮಶ್ರೀಯನ್ನು ಕರ್ತವ್ಯ ಪಥದಲ್ಲಿ ತೊರೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ, "ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪದಕವನ್ನು ಮನೆಗೆ ಮತ್ತೆ ತೆಗೆದುಕೊಂಡು ಹೋಗುವುದಿಲ್ಲ" ಎಂದು ಹೇಳಿದರು.

“ನಾನು ಮೊದಲೇ ಹೇಳಿದಂತೆ ನಾವು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗಾಗಿ ಹೋರಾಡುತ್ತಿದ್ದೆವು. ನನ್ನಿಂದ ಅವರಿಗೆ ನ್ಯಾಯ ಸಿಗಲಿಲ್ಲ. ಈ ಕಾರಣದಿಂದಾಗಿ, ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಶಸ್ತಿಯನ್ನು ಹಿಂದಿರುಗಿಸಲು ನಾನು ಇಲ್ಲಿಗೆ ಬಂದಿದ್ದೇನೆ, ಆದರೆ ನನಗೆ ಅಪಾಯಿಂಟ್‌ಮೆಂಟ್ ಇಲ್ಲದ ಕಾರಣ ಪ್ರಧಾನಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿಗೆ ಬಿಡುವಿಲ್ಲದ ವೇಳಾಪಟ್ಟಿ ಇದೆ. ಹಾಗಾಗಿ ಪ್ರಧಾನಿಗೆ ಬರೆದ ಪತ್ರದೊಂದಿಗೆ ನನ್ನ ಪ್ರಶಸ್ತಿಯನ್ನು ಬಿಟ್ಟು ಹೋಗುತ್ತಿದ್ದೇನೆ. ನಾನು ಈ ಪದಕವನ್ನು ನನ್ನ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ" ಎಂದು ಪುನಿಯಾ ಸುದ್ದಿಗಾರರಿಗೆ ತಿಳಿಸಿದರು.

ಅದಕ್ಕೂ ಮುನ್ನ, ಪ್ರಧಾನಿ ಭೇಟಿಯಾಗಲು ಹೋದ ಪುನಿಯಾರನ್ನು 'ಪ್ರಧಾನಿಯನ್ನು ಭೇಟಿಯಾಗಲು ಅನುಮತಿ ಇದೆಯೇ?' ಎಂದು ಪ್ರಶ್ನಿಸಿ ಪೊಲೀಸರು ತಡೆದಿದ್ದರು.

‘’ಇಲ್ಲ, ಅನುಮತಿ ಸಿಕ್ಕಿಲ್ಲ. ಸಾಧ್ಯವಾದರೆ ದಯವಿಟ್ಟು ಈ ಪತ್ರವನ್ನು ಪ್ರಧಾನಿ ಕಚೇರಿಗೆ ತಲುಪಿಸಿ. ಒಳಗೆ ಹೋಗಲು ನನಗೆ ಸಾಧ್ಯವಾಗದು. ನಾನು ಪ್ರತಿಭಟನೆ ನಡೆಸುತ್ತಿಲ್ಲ’’ ಎಂದು ಬಜರಂಗ ಪುನಿಯ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News