ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅತಿ ಕಿರಿಯ ಸ್ಪರ್ಧಿ: ದಿನಿದಿ ದೇಸಿಂಘು
ಹೊಸದಿಲ್ಲಿ: ಭಾರತದ ಹದಿಹರಯದ ಈಜು ಪ್ರತಿಭೆ ದಿನಿದಿ ದೇಸಿಂಘು ತನ್ನ ಒಲಿಂಪಿಕ್ಸ್ ಅಭಿಯಾನವನ್ನು ಪ್ಯಾರಿಸ್ ಒಲಿಂಪಿಕ್ಸ್ ನೊಂದಿಗೆ ಆರಂಭಿಸಲಿದ್ದಾರೆ. ಹದಿನಾಲ್ಕು ವರ್ಷದ ದಿನಿದಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
‘‘ನಾನು ಚಿಕ್ಕವಳಿದ್ದಾಗ ನೀರನ್ನು ಇಷ್ಟಪಡಲಿಲ್ಲ, ನೀರಿಗೆ ಇಳಿಯಲು ಬಯಸಲಿಲ್ಲ. ಕೊಳದಲ್ಲಿ ಕಾಲಿರಿಸಲು ನನಗೆ ಸಾಧ್ಯವಾಗಲಿಲ್ಲ. ನನ್ನ ತಲೆಯನ್ನು ನೀರಿನಲ್ಲಿ ಮುಳುಗಿಸಲು ಆಗುತ್ತಿರಲಿಲ್ಲ. ನಾನು ತುಂಬಾ ಒದ್ದಾಡಿದೆ. ಆಗ ನನಗೆ ಆರು ವರ್ಷವಾಗಿತ್ತು. ಮುಂದಿನ ವರ್ಷ ಮತ್ತೆ ಬಂದಾಗಲೂ ನನ್ನ ಹೆದರಿಕೆ ಹೋಗಿರಲಿಲ್ಲ’’ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ನೊಂದಿಗೆ ಮಾತನಾಡಿದ ದಿನಿದಿ ಹೇಳಿದರು.
‘‘ವಾಸ್ತವವಾಗಿ, ನಾನು ಈಜುವುದನ್ನು ಕಲಿಯುವ ಮೊದಲೇ ನನ್ನ ಹೆತ್ತವರು ಕಲಿತರು. ನನ್ನಲ್ಲಿ ಧೈರ್ಯ ತುಂಬುವುದಕ್ಕಾಗಿ ಅವರು ಕೊಳಕ್ಕೆ ಇಳಿದರು. ಅಲ್ಲಿಂದ ನನ್ನ ಈಜು ಆರಂಭವಾಯಿತು’’ ಎಂದು ಅವರು ಹೇಳಿದರು.
‘‘ಮೊದಲು ನನ್ನನ್ನು ಈಜಿಗೆ ಪರಿಚಯಿಸಿದಾಗ ನನಗೆ ಈಜಿನ ಮೂಲ ಜ್ಞಾನವೂ ಇರಲಿಲ್ಲ. ನನಗೆ ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್ಸ್ಟ್ರೋಕ್ ಮುಂತಾದ ಸ್ಟ್ರೋಕ್‌ಗಳು ಮತ್ತು ಬಟರ್‌ಫ್ಲೈ ಗೊತ್ತಿತ್ತು. ಅಷ್ಟೇ ನನಗೆ ಗೊತ್ತಿದ್ದದ್ದು. ಆಗ ಅಲ್ಲಿ ಸುಮಾರು 13 ವರ್ಷದ ಮಕ್ಕಳಿದ್ದರು. ನನ್ನಂಥ 9 ವರ್ಷದ ಒಬ್ಬಳಿದ್ದಳು. ನನಗೆ ಸಹಾಯ ಕೇಳಲು ಹೆದರಿಕೆಯಾಗುತ್ತಿತ್ತು. ಏನು ಮಾಡುವುದು ಎಂದೇ ನನಗೆ ಗೊತ್ತಿರಲಿಲ್ಲ’’ ಎಂದು ಅವರು ಹೇಳಿದರು.
ದಿನಿದಿಗೆ 8 ವರ್ಷ ಆಗಿದ್ದಾಗ ನಡೆದ ಘಟನೆಯೊಂದನ್ನು ಅವರ ತಾಯಿ ಜೆಸಿತಾ ಹೀಗೆ ವಿವರಿಸುತ್ತಾರೆ.
‘‘ದಿನಿದಿಯಲ್ಲಿ ಪ್ರತಿಭೆ ಇದೆ ಎನ್ನುವುದು ಗೊತ್ತಿತ್ತು. ಅವಳು ಕೊಳದಲ್ಲಿ ಚೆನ್ನಾಗಿ ಈಜುತ್ತಾಳೆ. ಆದರೆ, ಸ್ಪರ್ಧೆಗಳಲ್ಲಿ ಹಿಂಜರಿಯುತ್ತಾಳೆ. ಒಂದೋ ಸ್ಪರ್ಧೆಯ ಮುನ್ನಾ ದಿನ ಕಾಯಿಲೆ ಬೀಳುತ್ತಾಳೆ ಅಥವಾ ಸ್ಪರ್ಧೆಯ ದಿನ ಕೊಳಕ್ಕೆ ಇಳಿಯುವಾಗ ವಾಂತಿ ಮಾಡುತ್ತಾಳೆ’’ ಎಂದು ಅವರು ಹೇಳಿದರು.
‘‘ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಬಸ್ ಟಿಕೆಟ್ ಖರೀದಿಸಿದೆ. ನಾನೂ ಬಸ್‌ನಲ್ಲಿ ವಾಂತಿ ಮಾಡುತ್ತೇನೆ. ಬಸ್‌ನಲ್ಲಿ ಇಬ್ಬರೂ ನಿರಂತರವಾಗಿ ವಾಂತಿ ಮಾಡಿದೆವು. ಸ್ಪರ್ಧೆಯ ಸ್ಥಳಕ್ಕೆ ಹೋದಾಗ, ‘ನನಗೆ ಹೆದರಿಕೆಯಾಗುತ್ತದೆ, ನಾನು ಈಜುವುದಿಲ್ಲ’ ಎಂದು ಹೇಳಿದಳು. ಆದರೆ, ಕೊಳಕ್ಕೆ ಹೋಗಿ ನೋಡೋಣ. ಬೇಡದಿದ್ದರೆ ಹಿಂದಿರುಗೋಣ ಎಂದೆ. ಅವಳು ಕೊಳದ ಸುತ್ತಲೂ ನಡೆದಳು. ನನ್ನತ್ತ ತಿರುಗಿ ಹೇಳಿದಳು: ‘‘ನನಗೆ ಈಜಬಹುದು ಅನಿಸುತ್ತದೆ’’. ಅಲ್ಲಿ ಚಿನ್ನ ಗೆದ್ದಳು. ಆ ಬಳಿಕ ಸ್ಪರ್ಧೆಗೆ ಮುನ್ನ ಅವಳಿಗೆ ಜ್ವರ ಬಂದಿಲ್ಲ ಅಥವಾ ವಾಂತಿ ಮಾಡಿಲ್ಲ’’ ಎಂದು ಜೆಸಿತಾ ಹೇಳಿದರು.
ದಿನಿದಿ ಪ್ರಸಕ್ತ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಅವರು 2022ರ ಹಾಂಗ್‌ಝೂ ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ್ದಾರೆ.