ಆಕರ್ಷಣೆ ಕಳೆದುಕೊಳ್ಳುತ್ತಿರುವ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯ

Update: 2024-04-29 07:44 GMT
Editor : jafar sadik | Byline : ಜೆಸಿಂತಾ

ಮಂಗಳೂರು: ನಗರದ ಬಿಜೈಯಲ್ಲಿರುವ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯವು ನಿರ್ವಹಣೆಯ ಕೊರತೆಯಿಂದಾಗಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ.

ದ.ಕ.ಜಿಲ್ಲೆಯ ಏಕೈಕ ಸರಕಾರಿ ವಸ್ತು ಸಂಗ್ರಹಾಲಯ ಇದಾಗಿದ್ದು, 1960ರಲ್ಲಿ ಅಂದಿನ ಉಪರಾಷ್ಟ್ರಪತಿ ಯಾಗಿದ್ದ ಬಿಡಿ ಜತ್ತಿ ಅವರಿಂದ ಉದ್ಘಾಟನೆಗೊಂಡಿತ್ತು. ಮಂಗಳೂರಿನ ಪ್ರವಾಸಿ ತಾಣಗಳ ಪೈಕಿ ಇದು 20ನೇ ಸ್ಥಾನದಲ್ಲಿದ್ದು, ಐತಿಹಾಸಿಕ ಸ್ಮಾರಕಗಳು, ಶಿಲ್ಪ ಕಲೆಗಳನ್ನು ಒಳಗೊಂಡಿರುವ ಪ್ರದರ್ಶನದ ವೇದಿಕೆಯೂ ಇಲ್ಲಿದೆ. ಆದರೆ ಪ್ರಚಾರದ ಕೊರತೆಯಿಂದ ದ.ಕ.ಜಿಲ್ಲೆಯ ಜನರಿಗೇ ಇದರ ಬಗ್ಗೆ ಮಾಹಿತಿ ಇಲ್ಲ ಎಂಬಂತಾಗಿದೆ.

ಭಾರತದ ಪರಂಪರೆಯ ಬಗ್ಗೆ ಮಾಹಿತಿಯನ್ನು ಈ ವಸ್ತು ಸಂಗ್ರಾಹಲಯ ನೀಡುತ್ತದೆ. ಆದರೆ ವಿದ್ಯಾರ್ಥಿಗಳು ಮಾತ್ರ ಹೆಚ್ಚಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಸ್ತು ಸಂಗ್ರಹಾಲಯಕ್ಕೆ ಹೊರ ರಾಜ್ಯದ ಕೆಲವು ಪ್ರವಾಸಿಗರು ಮಾಹಿತಿ ಕೇಳಿಕೊಂಡು ಭೇಟಿ ನೀಡುತ್ತಾರೆ. ಆದರೆ ಸ್ಥಳೀಯ ಪ್ರವಾಸಿಗರ ಸಂಖ್ಯೆ ಶೂನ್ಯ ಎಂಬಂತಾಗಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ಕೊರತೆಗಳು ಎದ್ದು ಕಾಣುತ್ತಿದೆ ಎಂಬ ಆರೋಪವೂ ಇದೆ. ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಅಥವಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕುಠಿತಗೊಂಡರೆ ಅಚ್ಚರಿ ಇಲ್ಲ.

ವಿದ್ಯುತ್ ಕೊರತೆ: 1939ರಲ್ಲಿ ಬಿಜೈ ಗುಡ್ಡದಲ್ಲಿ ಮುಂಬೈನ ನುರಿತ ಇಂಜಿನಿಯರ್‌ಗಳಿಂದ ಹಡಗಿನ ಆಕಾರದಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡವು ಮಂಗಳೂರಿನ ಕಾಂಕ್ರಿಟ್ ಕಟ್ಟಡಗಳ ಪೈಕಿ ಎರಡನೇಯದು ಮತ್ತು ವಿದ್ಯುತ್ ಸಂಪರ್ಕ ಹೊಂದಿದ ಕಟ್ಟಡಗಳಲ್ಲಿ ಮೊದಲನೆಯದು ಎಂದು ಗುರುತಿಸಲ್ಪಟ್ಟಿತ್ತು. ಆದರೆ ಈಗ ಈ ಕಟ್ಟಡದಲ್ಲಿ ಸರಿಯಾದ ವಿದ್ಯುತ್ ಸಂಪರ್ಕ ಇಲ್ಲದಂತಾಗಿದ್ದು, ವ್ಯವಸ್ಥಿತವಾದ ಶೌಚಾಲಯದ ಕೊರತೆಯು ಇದೆ.

ಆವರಣದ ನಿರ್ವಹಣೆಯೂ ಇಲ್ಲ: ಶ್ರೀಮಂತಿ ಬಾಯಿ ವಸ್ತು ಸಂಗ್ರಹಾಲಯಕ್ಕೆ ಪ್ರವೇಶಿಸುವಾಗಲೇ ಅದರ ಆವರಣದಲ್ಲಿ ಅನೇಕ ಐತಿಹಾಸಿಕ ವಸ್ತುಗಳನ್ನು ಕಾಣಬಹುದಾಗಿತ್ತು. ಆದರೆ ಆವರಣವು ಸರಿಯಾದ ನಿರ್ವಹಣೆ ಇಲ್ಲದೆ ಅಲ್ಲಿರುವ ಗಿಡಗಳು ಬಿಸಿಲಿನ ತಾಪಕ್ಕೆ ಒಣಗುತ್ತಿದೆ. ಅಲ್ಲಿನ ಸ್ಮಾರಕಗಳು ಬೆಳೆದ ಗಿಡಗಳ ನಡುವೆ ಕಾಣೆಯಾಗುತ್ತಿದೆೆ. ಪ್ರಸಕ್ತ ಹೊರಗುತ್ತಿಗೆ ಆಧಾರದ ಮೇಲೆ 5 ಮಂದಿ ಕೆಲಸಗಾರರಿದ್ದು, ಸಂಗ್ರಹಾಲಯದ ಶುಚಿತ್ವ ನಿರ್ವಹಣೆಯೊಂದಿಗೆ ಗಿಡಗಳಿಗೆ ನೀರನ್ನು ಹಾಯಿಸುವ ಕೆಲಸವನ್ನು ಮಾಡುತ್ತಿದ್ದಾರೆೆೆ.

ಸೂಚನ ಫಲಕಗಳಿಲ್ಲ: ವಸ್ತು ಸಂಗ್ರಹಾಲಯ ಎಲ್ಲಿದೆ ಎಂದು ತಿಳಿಯಲು ಪ್ರವಾಸಿಗರು ಪರದಾಡಬೇಕಾಗಿದೆ. ಯಾಕೆಂದರೆ ಈ ವಸ್ತು ಸಂಗ್ರಹಾಲಯದ ಸುತ್ತಮುತ್ತ ಯಾವುದೇ ಸೂಚನಾ ಫಲಕಗಳಿಲ್ಲ. ಆರಂಭದಲ್ಲಿ ಸಂಗ್ರಹಾಲಯದ ಒಳಗೆ ಮತ್ತು ಹೊರಗೆ ಎರಡು ಸೂಚನಾ ಫಲಕಗಳಿತ್ತು. ರಸ್ತೆ ಅಗಲೀಕರಣದ ಕಾಮಗಾರಿಯ ಸಂದರ್ಭ ಅದನ್ನು ತೆಗೆದು ಬದಿಗೆ ಸರಿಸಲಾಗಿದೆ.

ಕ್ಯೂಆರ್‌ಕೋಡ್ ವ್ಯವಸ್ಥೆ ಬೇಕು: ಎಲ್ಲಾ ಸೌಲಭ್ಯಗಳೊಂದಿಗೆ ಕ್ಯೂಆರ್‌ಕೋಡ್ ವ್ಯವಸ್ಥೆಯನ್ನು ಇಲ್ಲಿಗೆ ಕಲ್ಪಿಸಬೇಕಿದೆ. ತಂತ್ರಜ್ಞಾನ ಯುಗದಲ್ಲಿ ದೇಶ-ವಿದೇಶದ ಜನರು ಆನ್‌ಲೈನ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾರೆ. ಕ್ಯೂಆರ್‌ಕೋಡ್ ವ್ಯವಸ್ಥೆಯು ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗಬಹುದು ಎಂದು ಮೇಲ್ವಿಚಾರಕಿ ಧನಲಕ್ಷ್ಮಿ ಅಮ್ಮಾಳ್ ಅಭಿಪ್ರಾಯಪಟ್ಟಿದ್ದಾರೆ.

ವಸ್ತು ಸಂಗ್ರಹಾಲಯದ ಪ್ರವೇಶ ದ್ವಾರದ ಬಳಿಯ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ವಸ್ತು ಸಂಗ್ರಹಾಲಯವು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಇನ್ನೂ ಕೆಲವು ಸೌಕರ್ಯಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಈಗಾಗಲೆ ಮನವಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಬೇಡಿಕೆಗಳು ಈಡೇರಬಹುದು ಎಂದು ಮೇಲ್ವಿಚಾರಕಿ ಧನಲಕ್ಷ್ಮಿ ಅಮ್ಮಾಳ್ ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜೆಸಿಂತಾ

contributor

Similar News