ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ಹಲವೆಡೆ ಪ್ರವಾಹದಿಂದಾಗಿ ರಸ್ತೆ, ಸೇತುವೆ ಸಂಪರ್ಕ ಕಡಿತ

Update: 2023-07-23 15:05 GMT

ಮಡಿಕೇರಿ ಜು.23 : ಕೊಡಗು ಜಿಲ್ಲೆಯಾದ್ಯಂತ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ 24 ಗಂಟೆಗಳಲ್ಲಿ ದಾಖಲೆಯ 12 ಇಂಚಿಗೂ ಅಧಿಕ ಮಳೆಯಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಜು.24 ರಂದು ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜು ಮತ್ತು ಅಂಗನವಾಡಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮುಂಗಾರು ಬಿರುಸುಗೊಳ್ಳುತ್ತಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಹಲವೆಡೆ ಪ್ರವಾಹದಿಂದಾಗಿ ರಸ್ತೆ ಮತ್ತು ಸೇತುವೆ ಸಂಪರ್ಕ ಕಡಿತಗೊಂಡಿದೆ. ಮರ, ಬರೆ, ವಿದ್ಯುತ್ ಕಂಬಗಳು ಬೀಳುತ್ತಲೇ ಇದ್ದು, ರಸ್ತೆ ಮತ್ತು ಕಾಲು ಸೇತುವೆಗಳು ಕೊಚ್ಚಿ ಹೋದ ಘಟನೆಯೂ ನಡೆದಿದೆ. ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

::: ಹಾರಂಗಿಯಿಂದ ನೀರು :::  

 ಜಿಲ್ಲೆಯ ಹಾರಂಗಿ ಜಲಾಶಯದಿಂದ 25,500 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದ್ದು, ಜಲಾಶಯದ ಒಳ ಹರಿವು 31,140 ಕ್ಯೂಸೆಕ್ಸ್ ಆಗಿದೆ.

ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ನಾಪೋಕ್ಲು ಮತ್ತು ಮಡಿಕೇರಿ ರಸ್ತೆ ಜಲಾವೃತಗೊಂಡಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಆವರಣಕ್ಕೆ ನದಿ ನೀರು ಬಂದಿದೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಗ್ರಾಮಸ್ಥರ ಹಾಗೂ ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿದೆ. ಸಿದ್ದಾಪುರ, ಕರಡಿಗೋಡು ಭಾಗದಲ್ಲಿ ಕಾವೇರಿ ತುಂಬಿ ಹರಿಯುತ್ತಿರುವುದರಿಂದ ಇಕ್ಕೆಲಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.

ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ನಾಪೋಕ್ಲು -ಮೂರ್ನಾಡು ಮುಖ್ಯ ರಸ್ತೆಯ ಬೊಳಿಬಾಣೆ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಕಡಿತಗೊಂಡಿದೆ. ಚೆರಿಯಪರಂಬು, ಕಲ್ಲು ಮೊಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನದಿ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.

ಅದರಂತೆ ನಾಪೋಕ್ಲುವಿನಿಂದ ಬೆಟ್ಟಗೇರಿ ಮಡಿಕೇರಿ ತೆರಳುವ ಕೊಟ್ಟಮುಡಿ ಬಳಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಕಕ್ಕಬ್ಬೆ ಗ್ರಾಮದಿಂದ ಕುಂಜಿಲ ಪೈನರಿ ದರ್ಗಾಕ್ಕೆ ಹೋಗುವ ರಸ್ತೆ ಜಲಾವೃತಗೊಂಡಿದೆ. ನಾಪೋಕ್ಲುವಿನಿಂದ ವಿರಾಜಪೇಟೆಗೆ ತೆರಳುವ ಕೈಕಾಡು ಹೊಳೆ ಹಾಗೂ ಎಡಪಾಲ ಮಾರ್ಗವಾಗಿ ಕಡಂಗ ತೆರಳುವ ಅರಪಟ್ಟು ಎಂಬಲ್ಲಿ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ.

ನಾಪೋಕ್ಲು ಸುತ್ತಮುತ್ತ ಮಳೆ ಆರ್ಭಟ ಮುಂದುವರಿದಿದ್ದು, ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ತೀವ್ರತೆ ಹೀಗೆ ಮುಂದುವರೆದರೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಎಲ್ಲಾ ಸಾಧ್ಯತೆಗಳಿದೆ.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಅಭಯ ಅರಣ್ಯದಂಚಿನಲ್ಲಿರುವ ಚಿಣ್ಣರಹಾಡಿಗೆ ಹೋಗುವ ತೋಡಿಗೆ ನಿರ್ಮಿಸಿದ್ದ ಕಾಲು ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಗಿರಿಜನರು ಹಾಗೂ ವಿದ್ಯಾರ್ಥಿಗಳು ಸಮೀಪದ ಸಂಪರ್ಕ ಕಳೆದುಕೊಂಡಿದ್ದು, ಸುತ್ತಿ ಬಳಸಿ ಕಾಫಿ ತೋಟ ಮತ್ತು ಗದ್ದೆಗಳ ಮೂಲಕ ಕಾಲ್ನಡಿಗೆಯಲ್ಲಿ ಮುಖ್ಯ ರಸ್ತೆಗೆ ಬರಬೇಕಾಗಿದೆ. ವಾಹನಗಳ ಸಂಪರ್ಕ ಅಸಾಧ್ಯವಾಗಿದ್ದು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಗಿದೆ.

ದಕ್ಷಿಣ ಕೊಡಗಿನಲ್ಲಿ ಮಳೆಯ ತೀವ್ರತೆ ಹೆಚ್ಚು ಇದ್ದು, ನದಿಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಚೆಸ್ಕಾಂ ಸಿಬ್ಬಂದಿಗಳು ರಾತ್ರಿ, ಹಗಲೆನ್ನದೆ ಸುರಿಯುವ ಮಳೆಯ ನಡುವೆಯೇ ವಿದ್ಯುತ್ ಮಾರ್ಗಗಳನ್ನು ದುರಸ್ತಿ ಪಡಿಸುತ್ತಿದ್ದಾರೆ.

ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ, ಕುಶಾಲನಗರ ಮತ್ತು ಮಡಿಕೇರಿ ತಾಲ್ಲೂಕಿನ ಎಲ್ಲಾ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಗಾಳಿ, ಮಳೆ, ಮೈಕೊರೆಯುವ ಚಳಿ ಇದೆ. ಜಲಪಾತಗಳ ಸೊಬಗು ದುಪ್ಪಟ್ಟಾಗಿದ್ದು, ಪ್ರಕೃತಿ ಪ್ರಿಯ ಪ್ರವಾಸಿಗರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದೆ. 

 

 

 

 

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News