ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಸಂಸದರ ನಿಧಿಯಿಂದ 55.88 ಕೋಟಿ ರೂ. ಬಳಕೆ : ವರದಿ
ಬೆಂಗಳೂರು: ಬೆಂಗಳೂರಿನ ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಿಗೆ ಮೂರು ಸಂಸದರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಒಟ್ಟು 55.88 ಕೋಟಿ ರೂ. ಬಳಕೆ ಮಾಡಿದ್ದಾರೆ ಎಂದು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ(ಬಿ-ಪ್ಯಾಕ್) ವರದಿ ತಿಳಿಸಿದೆ.
ನಗರದಲ್ಲಿ ವರದಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿ-ಪ್ಯಾಕ್ ಮುಖ್ಯಸ್ಥೆ ರೇವತಿ ಅಶೋಕ್, ಕನ್ನಡ ನಾಡಿನ ಅಭಿವೃದ್ದಿಗಾಗಿ, ಯುವಜನರಿಗಾಗಿ ಸದನದಲ್ಲಿ ಪ್ರಶ್ನೆ ಮಾಡಿದವರ ಪೈಕಿ, ಬೆಂಗಳೂರು ಕೇಂದ್ರದ ಸಂಸದ ಪಿ.ಸಿ.ಮೋಹನ್ ಒಟ್ಟು 189 ಪ್ರಶ್ನೆಗಳನ್ನು ಕೇಳಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ 382 ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡರು ಒಂದು ಪ್ರಶ್ನೆಯನ್ನು ಕೇಳಿಲ್ಲವೆಂದು ವರದಿ ತಿಳಿಸಿದೆ ಎಂದು ಹೇಳಿದರು.
ಸಂಸದರಿಗೆ ವಾರ್ಷಿಕವಾಗಿ ಕೇಂದ್ರದಿಂದ 5 ಕೋಟಿ ರೂ.ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಹಣದಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಡಿ.ವಿ.ಸದಾನಂದಗೌಡರು ಒಟ್ಟು 18.69 ಕೋಟಿ ರೂ ಶಿಫಾರಸ್ಸು ಮಾಡಿದ್ದಾರೆ. 9.18 ಕೋಟಿ ರೂ. ಮೂಲಸೌಕರ್ಯಕ್ಕಾಗಿ, 6.38 ಕೋಟಿ ರೂ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ಮತ್ತು 2022-23ರಲ್ಲಿ 4.35 ಕೋಟಿ ರೂ. ಕಾಮಗಾರಿಗಳಿಗಾಗಿ ಖರ್ಚು ಮಾಡಿದ್ದಾರೆಂದು ವರದಿ ನೀಡಿದರು.
ದಕ್ಷಿಣ ಸಂಸದ ತೇಜಸ್ವಿ ಸೂರ್ಯ 19.36 ಕೋಟಿ ರೂ ಶಿಫಾರಸ್ಸು ಮಾಡಿದ್ದಾರೆ. 8.86 ಕೋಟಿ ರೂ. ಸಾರ್ವಜನಿಕ ಮೂಲ ಸೌಕರ್ಯಕ್ಕಾಗಿ, 3.75 ಕೋಟಿ ರೂ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗೆಳಿಗೆ ಹಾಗೂ ಸ್ಥಳೀಯ ಯೋಜನಗಳಿಗೆ 2022-23ರಲ್ಲಿ 3.38 ಕೋಟಿ ರೂ. ಕಾಮಗಾರಿಗಳಿಗಾಗಿ ಖರ್ಚು ಮಾಡಿದ್ದಾರೆಂದು ತಿಳಿಸಿದರು.
ಬೆಂಗಳೂರು ಕೇಂದ್ರ ಪಿ.ಸಿ.ಮೋಹನ್, ಒಟ್ಟು 17.79 ಕೋಟಿ ರೂ ಶಿಫಾರಸ್ಸು ಮಾಡಿದ್ದು, 6.58 ಕೋಟಿ ರೂ. ಕುಡಿಯುವ ನೀರು ಮತ್ತು ಒಳಚರಂಡಿಗಾಗಿ, 5.42 ಕೋಟಿ ರೂ. ಸಾರ್ವಜನಿಕ ಮೂಲಸೌಕರ್ಯಕ್ಕಾಗಿ, ಸ್ಥಳೀಯ ಯೋಜನಗಳಿಗೆ 2022-23ರಲ್ಲಿ 3.38 ಕೋಟಿ ರೂ. ಕಾಮಗಾರಿಗಳಿಗಾಗಿ ಖರ್ಚು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಮೂರು ಸಂಸದರು ಒಟ್ಟಾಗಿ 55.88 ಕೋಟಿ ರೂ. ಅಭಿವೃದ್ದಿ ಕೆಲಸಗಳಿಗಾಗಿ ಶಿಫಾರಸ್ಸು ಮಾಡಿದ್ದಾರೆ. ಅದರಲ್ಲಿ 23.47 ಕೋಟಿ ರೂ.(ಶೇ.42.67) ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗಾಗಿ, 16.03 ಕೋಟಿ ರೂ. (ಶೇ.29.15) ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಮತ್ತು 7.25 ಕೋಟಿ ರೂ.(ಶೇ.13.22) ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡಿದ್ದಾರೆಂದು ರೇವತಿ ಅಶೋಕ್ ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ, ಸಂಸದರ ನಿಧಿಯನ್ನು 6 ಎಪ್ರಿಲ್ 2020 ರಿಂದ 8 ನವೆಂಬರ್ 2021 ರವರೆಗೆ ಅಮಾನತ್ತುಗೊಳಿಸಲಾಗಿತ್ತು. 2020-21ರಲ್ಲಿ ಯಾವುದೇ ಹಣವನ್ನು ಹಂಚಿಕೆ ಮಾಡಿರುವುದಿಲ್ಲ. 2021-22ರಲ್ಲಿ 19 ನವೆಂಬರ್ 2021 ರಿಂದ 31 ಮಾರ್ಚ್ 2022 ರವರೆಗೆ ಪ್ರತಿ ಸಂಸದರಿಗೆ ಈ ಯೋಜನೆಯಡಿ ಕೇವಲ 2 ಕೋಟಿ ರೂ. ಬಿಡುಗಡೆ ಆಗಿದೆ ಎಂದರು.
ಈ ವರದಿಯ ಮೂಲಕ ಸಂಸದರು ಐದು ವರ್ಷಗಳಲ್ಲಿ ಕೈಗೊಂಡ ಕಾರ್ಯಗಳ ಬಗ್ಗ ಮತದಾರರಿಗೆ ತಿಳಿಸುವ ಪ್ರಯತ್ನ ಇದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತವನ್ನು ತಪ್ಪದೇ ಚಲಾಯಿಸಿ, ಮತ ಚಲಾವಣೆಯ ಕುರಿತು ಬೇರೆಯವರಿಗೂ ಅರಿವು ಮೂಡಿಸಿ ಎಂದು ರೇವತಿ ಅಶೋಕ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಿ-ಪ್ಯಾಕ್‍ನ ಸದಸ್ಯರಾದ ಶರತ್ ಎಸ್.ಆರ್ ಹಾಗೂ ಸಚಿನ್ ಎ.ಟಿ ಉಪಸ್ಥಿತರಿದ್ದರು