ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಮರೆಮಾಚಲು 6,946 ಮೇಲ್ಮನವಿ ಅರ್ಜಿ ವಜಾ: RTI ಕಾರ್ಯಕರ್ತರ ಆರೋಪ
ಬೆಂಗಳೂರು, ಸೆ.2: ಬಿಜೆಪಿ ಸರಕಾರದ ಅವಧಿಯಲ್ಲಿ ಮಾಹಿತಿಯನ್ನು ಕೋರಿ ಸಲ್ಲಿಸಿದ್ದ 6,946 ಮೇಲ್ಮನವಿ ಅರ್ಜಿಗಳನ್ನು ರಾಜ್ಯ ಮಾಹಿತಿ ಆಯೋಗವು ಒಂದೇ ದಿನದಲ್ಲಿ ವಜಾಗೊಳಿಸಿದ್ದು, ಬಿಜೆಪಿ ಸರಕಾರದಲ್ಲಿ ನಡೆದಿರುವ ಅಕ್ರಮಗಳನ್ನು ಮರೆಮಾಚಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.
ಮಾಹಿತಿಯನ್ನು ಕೊಡಿಸುವುದು ಮಾಹಿತಿ ಆಯೋಗದ ಕೆಲಸವಾಗಿದೆ. ಆದರೆ ಆಯೋಗವೇ 6,946 ಮೇಲ್ಮನವಿ ಅರ್ಜಿಗಳನ್ನು ವಜಾ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ಮಾಹಿತಿ ಹಕ್ಕು ಕಾಯ್ದೆಯನ್ನೇ ದುರ್ಬಲಗೊಳಿಸಿದೆ. ದೇಶದ ಯಾವುದೇ ರಾಜ್ಯದಲ್ಲಿ ಇದುವರೆಗೂ ಇಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಕರ್ನಾಟಕದಲ್ಲಿ ಆಯೋಗವು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರಿಂದ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ಎಚ್ಚಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಮಾಹಿತಿ ಆಯೋಗದಲ್ಲಿ 2022ರ ಅಂತ್ಯಕ್ಕೆ ಸುಮಾರು 28 ಸಾವಿರ ಮೇಲ್ಮನವಿ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದವು. ಆದರೆ ಎನ್.ಸಿ. ಶ್ರೀನಿವಾಸ ಮುಖ್ಯ ಆಯುಕ್ತರಾದ ಮೇಲೆ ವಿಚಾರಣೆಗೆ ಬಾಕಿಯಿರುವ ಮೇಲ್ಮನವಿ ಅರ್ಜಿಗಳ ಸಂಖ್ಯೆ 42 ಸಾವಿರ ಗಡಿ ದಾಟಿದೆ. ಅದರಲ್ಲಿ ಅತಿ ಹೆಚ್ಚು 4(1)(ಎ)(ಬಿ)ಗೆ ಸಂಬಂಧಿಸಿದ ಪ್ರಕರಣಗಳಾಗಿವೆ ಎಂದು ತಿಳಿಸಿದ್ದಾರೆ.
ಮಾಹಿತಿ ಆಯೋಗದಲ್ಲಿರುವ ಆಯುಕ್ತರು ಎರಡು-ಮೂರು ಗಂಟೆಗಳ ಕಾಲ ಕಲಾಪವನ್ನು ನಡೆಸುತ್ತಿದ್ದಾರೆ. ಕೋವಿಡ್‍ನಿಂದಾಗಿ ಆರಂಭವಾದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಇಂದಿಗೂ ಅರ್ಜಿಯನ್ನು ವಿಲೇವಾರಿ ಮಾಡಲಾಗುತ್ತಿದೆ. ಇದು ಮಾಹಿತಿ ಆಯುಕ್ತರ ಬೇಜಾವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.