ಬಜೆಟ್‍ನಲ್ಲಿ ಐಸಿಡಿಎಸ್ ಅನುದಾನ ಹೆಚ್ಚಳ, ಕನಿಷ್ಠ ವೇತನಕ್ಕೆ ಒತ್ತಾಯಿಸಿ ಅಂಗನವಾಡಿ ನೌಕರರ ಹೋರಾಟ

Update: 2024-01-23 14:57 GMT

ಬೆಂಗಳೂರು: ಫೆಬ್ರುವರಿಯಲ್ಲಿ ನಡೆಯುವ ಬಜೆಟ್‍ನಲ್ಲಿ ಐಸಿಡಿಎಸ್ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವುದು ಸೇರಿ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಮಂಗಳವಾರ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಬೃಹತ್ ಹೋರಾಟವನ್ನು ನಡೆಸಲಾಯಿತು.

ಐಸಿಡಿಎಸ್ ಮಾರ್ಗಸೂಚಿಯ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು ಮತ್ತು ಈ ಉದ್ದೇಶದ ಈಡೇರಿಕೆಗಾಗಿ 30-1-2023 ರಂದು ಪ್ರತಿ ದಿನ ಬೆಳಗ್ಗೆ 10 ರಿಂದ 1 ಗಂಟೆಯ ತನಕ ಕಡ್ಡಾಯವಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಮಾಡಬೇಕೆಂಬ ಆದೇಶವೂ ಇಲಾಖೆಯಿಂದ ಬಂದಿದೆ ಇದನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್‍ಎಚ್‍ಎಂ, ಐಸಿಪಿಎಸ್, ಎಸ್‍ಎಸ್‍ಎ, ಎಂಎನ್‍ಆರ್ ಇಜಿ ಮುಂತಾದ ಯೋಜನೆಗಳನ್ನು ಕೇಂದ್ರ ಸರಕಾರ ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರನ್ನಾಗಿ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

3ರಿಂದ 6ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕೇಂದ್ರ ಸರಕಾರ ಕಾನೂನು ರೂಪಿಸಬೇಕು. ಎನ್‍ಇಪಿ ನಿಲ್ಲಿಸಬೇಕು. 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ. 31 ಸಾವಿರ ರೂ. ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಟ 10 ಸಾವಿರ ರೂ. ಪಿಂಚಣಿ ಕೊಡಬೇಕು ಎಂದು ಆಗ್ರಹಿಸಿದರು.

ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತಿಸಬೇಕು. ಕಡಿತವಾಗಿರುವ ಅನುದಾನಗಳನ್ನು ವಾಪಸ್ಸು ಕೊಟ್ಟು, ಬೆಲೆಯೇರಿಕೆಯಾಧಾರದಲ್ಲಿ ಪೂರಕ ಪೌಷ್ಠಿಕ ಆಹಾರಕ್ಕೆ ಕೊಡುವ ಹಣವನ್ನು ಹೆಚ್ಚಳ ಮಾಡಬೇಕು. 2022ರ ಎಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪಿನಂತೆ ಎಲ್ಲ ಅಂಗನವಾಡಿ ನೌಕರರನ್ನು ಉದ್ಯೋಗಸ್ಥರೆಂದು ಪರಿಗಣಿಸಿ ಗ್ರಾಜ್ಯುಟಿ ಕಾಯ್ದೆಯನ್ನು ಕೇಂದ್ರ ಸರಕಾರ ದೇಶದೆಲ್ಲೆಡೆ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹೋರಾಟದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ, ಉಪಾಧ್ಯಕ್ಷೆ ಟಿ.ಲೀಲಾವತಿ, ಸಿಐಟಿಯು ಸಂಘಟನೆಯ ಕಾರ್ಯದರ್ಶಿ ಮಾಲಿನಿ ಮೇಸ್ತ ಸೇರಿದಂತೆ ನೂರಾರು ಅಂಗನವಾಡಿ ನೌಕರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News