ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಿ: ಎಚ್‍ಡಿ ಕುಮಾರಸ್ವಾಮಿ

Update: 2024-01-03 13:06 GMT

ಬೆಂಗಳೂರು: ‘ಶಕ್ತಿ ಯೋಜನೆ’ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ನನ್ನ ಬೆಂಬಲವಿದೆ. ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ತುರ್ತುಕ್ರಮ ವಹಿಸಿ, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬುಧವಾರ ʼಎಕ್ಸ್‌ʼ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಶಕ್ತಿ ಯೋಜನೆಯ ಪರಿಣಾಮ ನಿತ್ಯವೂ ಶಾಲೆಗೆ ಹೋಗಬೇಕಾಗಿರುವ ಮಕ್ಕಳಿಗೆ ಬಸ್ಸುಗಳಲ್ಲಿ ಪ್ರಯಾಣಕ್ಕೆ ಸ್ಥಳಾವಕಾಶ ಸಿಗುತ್ತಿಲ್ಲ. ಶಿಕ್ಷಕರು, ಕಾರ್ಮಿಕರಿಗೂ ಇದೇ ದುಸ್ಥಿತಿ. ಆಟೋ, ಲಗೇಜ್ ಆಟೋ, ಗೂಡ್ಸ್ ವಾಹನಗಳನ್ನು ಹತ್ತಿ ಅಪಾಯಕಾರಿ ರಸ್ತೆಗಳಲ್ಲಿ ಮಕ್ಕಳು ಶಾಲೆಗೆ ಹೋಗಬೇಕು, ಮನೆಗೆ ವಾಪಸ್ಸು ಬರಬೇಕು’ ಎಂದು ಅವರು ಗಮನ ಸೆಳೆದಿದ್ದಾರೆ.

‘ಒಂದೆಡೆ ಬಸ್ಸುಗಳ ಕೊರತೆ, ಇನ್ನೊಂದೆಡೆ ಮಹಿಳೆಯರು ಪ್ರವಾಸಿ ತಾಣಗಳಿಗೆ ಮುಗಿಬಿದ್ದ ಪರಿಣಾಮ ಮಕ್ಕಳು ರಾತ್ರಿಯಾದರೂ ಮನೆ ತಲುಪುತ್ತಿಲ್ಲ ಎನ್ನುವ ಪತ್ರಿಕೆಯ ವರದಿ ಆಘಾತಕಾರಿ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿ, ಮಕ್ಕಳ ಪಾಡು ಕೇಳುವವರಿಲ್ಲವಾಗಿದೆ. ಪರೀಕ್ಷೆ ಸಮಯದಲ್ಲಿ ಅವರ ಸಂಕಷ್ಟ ಹೇಳತೀರದು’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News