ತೆಂಗು ಬೆಳೆಗಾರರಿಗೆ ನ್ಯಾಯಕ್ಕಾಗಿ ಅರಸೀಕರೆಯಿಂದ ತುಮಕೂರುವರೆಗೆ ಪಾದಯಾತ್ರೆ: ಎಚ್.ಡಿ.ಕುಮಾರಸ್ವಾಮಿ

Update: 2023-12-10 13:44 GMT

ಹಾಸನ: ರಾಜ್ಯ ಸರಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಮೂಲಕ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಅರಸೀಕರೆಯಿಂದ ತುಮಕೂರುವರೆಗೆ ಪಾದಯಾತ್ರೆ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಹೇಳಿದ್ದಾರೆ.

 ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ʼರಾಜ್ಯ ಸರಕಾರ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ. ಕೊಬ್ಬರಿಗೆಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಮೀನಾಮೇಷ ಎಣಿಸುವ ಮೂಲಕ ತನ್ನ ರೈತವಿರೋಧಿ ನೀತಿಯ್ನು ಪ್ರದರ್ಶಿಸುತ್ತಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಹಾಸನ, ತುಮಕೂರು ಸೇರಿ ಹನ್ನೆರಡರಿಂದ ಹದಿಮೂರು ಜಿಲ್ಲೆಗಳಲ್ಲಿ ಬೆಳೆಯುವ ಕೊಬ್ಬರಿ ಬೆಲೆ ಶೇ.50ರಷ್ಟು ಕುಸಿದಿದೆ. ಕಳೆದ ಒಂದು ವರ್ಷದಿಂದ ಏಳೂವರೆ, ಎಂಟೂವರೆ ಸಾವಿರ ದರವನ್ನು ಮಾರುಕಟ್ಟೆಯಲ್ಲಿ ಕಾಣುತ್ತಿದ್ದೇವೆ. ಅದಕ್ಕೆ ಸರಕಾರ ಮಧ್ಯಸ್ಥಿಕೆ ವಹಿಸಿ ಆರ್ಥಿಕ ನೆರವು ಕೊಡಲು ಅವರು ಒತ್ತಾಯ ಮಾಡಿದ್ದಾರೆ. 

 ಶಿವಾನಂದ ಪಾಟೀಲ್ ಅವರು ಎರಡು ಲಕ್ಷ ಟನ್ ಕೊಬ್ಬರಿ ಉತ್ಪಾದನೆ ಇದೆ ಎಂದು ಹೇಳಿದ್ದಾರೆ. ಅಷ್ಟನ್ನು ಎರಡು ಸರಕಾರಗಳು ಖರೀದಿ ಮಾಡಿದರೆ 2,500 ಕೋಟಿ ರೂ. ಬರಬಹುದು. 1,500 ಕೋಟಿ ರೂ. ಸರಕಾರಕ್ಕೆ ವಾಪಸ್ ಬರುತ್ತದೆ. ಈ ಸರಕಾರದ ನೀತಿಯನ್ನು ನಾಡಿನ ಜನತೆ, ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಮ್ಮ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಕೊಬ್ಬರಿ ಬೆಳೆಯುವ ರೈತರಲ್ಲಿ ಮನವಿ ಮಾಡುತ್ತೇನೆ. ಎರಡು ಸರಕಾರಗಳ ಕಣ್ಣು ತೆರೆಸಲು ಅರಸೀಕೆರೆಯಿಂದ ತುಮಕೂರುವರೆಗೆ ಪಾದಯಾತ್ರೆ ಮಾಡುತ್ತೇನೆ. ನನಗೆ ಆರೋಗ್ಯ ಸಮಸ್ಯೆಯಿದೆ, ಅದಕ್ಕೆ ಹೆದರಿ ಕೂರಲ್ಲ. ಅಧಿವೇಶನ ಮುಗಿದ ಮೇಲೆ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದ ಅವರು; ಎನ್‌ಡಿಎ ಜತೆ ಮೈತ್ರಿ ಆಗಿದೆ ಎಂದು ಮೃದುಧೋರಣೆ ತೋರಲ್ಲ. ನಾನೇ ಸಿಎಂ ಆಗಿ ಅಧಿಕಾರದಲ್ಲಿ ಇದ್ದಿದ್ದರೆ ಕ್ವಿಂಟಾಲ್ ಕೊಬ್ಬರಿಗೆ ಹದಿನೈದು ಸಾವಿರ ರೂ. ಘೋಷಣೆ ಮಾಡುತ್ತಿದ್ದೆ. ನನ್ನ ಮನಸ್ಸಿಗೆ ನೋವಿದೆ, ಈ ಜನಗಳಲ್ಲಿ ಯಾವಾಗ ತಿಳಿವಳಿಕೆ ಬರುತ್ತದೆ ಎಂದು ಎಂದು ಅವರು ನೋವು ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News