ವಿಧಾನಸಭೆ ಅಧಿವೇಶನ | ತಮ್ಮದೇ ಶಾಸಕರ ವಿರುದ್ಧ ಸಿಎಂ ಅಸಮಾಧಾನ

Update: 2023-07-11 13:53 GMT

ಬೆಂಗಳೂರು, ಜು.11: ವಾಣಿಜ್ಯ ತೆರಿಗೆಯ ಸಹಾಯಕ ಆಯುಕ್ತರ ಕಚೇರಿ ತೆರೆಯುವ ಬಗ್ಗೆ ನನ್ನ ಜತೆ ಮಾತನಾಡಬೇಕು. ಅಧಿಕಾರಿಗಳ ಜತೆಯಲ್ಲ, ನಾನು ಹಣಕಾಸು ಸಚಿವ’ ಎಂದು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಗರಂ ಆದರು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಸದಸ್ಯ ಯಶವಂತರಾಯಗೌಡ ಪಾಟೀಲ್ ಪ್ರಶ್ನೆ ಕೇಳಿ, ‘ಇಂಡಿಯಲ್ಲಿ ಸಹಾಯಕ ಆಯುಕ್ತರ ಕಚೇರಿ ತೆರೆಯುವ ಅಗತ್ಯವಿದೆ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಅವರ ಜತೆ ಮಾತನಾಡಿದ್ದೇನೆ’ ಎಂದರು. ಇದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಹಣಕಾಸು ಇಲಾಖೆಯ ಸಚಿವ. ನೀವು ಅಧಿಕಾರಿಯನ್ನು ಕೇಳಿದ ತಕ್ಷಣ ಅಧಿಕಾರಿಯ ಮಾತನ್ನು ನಾನು ಕೇಳಬೇಕು ಅಂತಿಲ್ಲ. ನೀವು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಜತೆ ಮಾತನಾಡಿದರೆ ಆಗಲ್ಲ. ನಾನು ಸದನದಲ್ಲಿ ಉತ್ತರ ಕೊಡುವವನು. ಆಯುಕ್ತರು ಹೇಳಿದ ಮಾತನ್ನು ನಾನು ಕೇಳಬೇಕು ಎಂದೇನಿಲ್ಲ ಎಂದು ಗರಂ ಆದರು.

ಅಲ್ಲದೆ, ವಾಣಿಜ್ಯ ಸಹಾಯಕ ಆಯುಕ್ತರ ಕಚೇರಿ ತೆರೆಯಲು ಕೆಲವು ಮಾನದಂಡಗಳಿವೆ. ಆ ಮಾನದಂಡಗಳ ಮೇಲೆ ಕಚೇರಿಯನ್ನು ತೆರೆಯಲಾಗುತ್ತದೆ. ಸದ್ಯ ವಿಜಯಪುರದಲ್ಲಿ ಕಚೇರಿ ಇದೆ. ಇಂಡಿಯಲ್ಲಿ ಕಚೇರಿ ತೆರೆಯಲು ಮಾನದಂಡಗಳ ಅಡಿಯಲ್ಲಿ ಅವಕಾಶ ಇಲ್ಲ ಎಂದು ಸಿಎಂ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News