ಸಂಸತ್ ಮೇಲಿನ ದಾಳಿ ಪ್ರಕರಣ: ಮೋದಿ, ಅಮಿತ್ ಶಾ ರಾಜೀನಾಮೆಗೆ ಉಗ್ರಪ್ಪ ಆಗ್ರಹ

Update: 2023-12-19 13:34 GMT

ಬೆಂಗಳೂರು: ಸಂಸತ್ ಮೇಲಿನ ದಾಳಿಯ ಭದ್ರತಾ ವೈಫಲ್ಯದ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಲೋಕಸಭೆಯ ಸ್ಪೀಕರ್ ಹೊರಬೇಕು. ಅಲ್ಲದೆ, ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಘಟನೆಗೆ ಮೂಲ ಕಾರಣವಾಗಿರುವ ಮೈಸೂರಿನ ಸಂಸದ ಪ್ರತಾಪ್ ಸಿಂಹ ಈ ದಾಳಿಕೋರರ ಬಗ್ಗೆ ಯಾವುದೆ ಹೇಳಿಕೆ ನೀಡದೆ ತಲೆಮರೆಸಿಕೊಂಡಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ನಡೆಸುತ್ತಿದೆ. ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರನ್ನು ಅಮಾನತು ಮಾಡಿರುವುದು ಖಂಡನೀಯ. ತೃಣಮೂಲ ಕಾಂಗ್ರೆಸ್ ಸಂಸದರನ್ನು ಅನರ್ಹಗೊಳಿಸಿದ ಮಾದರಿಯಲ್ಲಿ ಪ್ರತಿಭಟನಾನಿರತ ಸಂಸದರನ್ನು ಅನರ್ಹಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ದೂರಿದರು.

ಸರಕಾರದ ವೈಫಲ್ಯವನ್ನು ಪ್ರಶ್ನೆ ಮಾಡುವ ಹಕ್ಕು ಸಂಸದರಿಗೆ ಇರುತ್ತದೆ. 2001ರ ಡಿ.13ರಂದು ಸಂಸತ್ತಿನ ಹೊರಗೆ ದಾಳಿ ಆಗಿತ್ತು. ಈ ಬಾರಿ ಸದನದ ಒಳಗೆ ದಾಳಿ ಆಗಿದೆ. ಈ ಭದ್ರತಾ ವೈಫಲ್ಯದ ಬಗ್ಗೆ ಪ್ರಧಾನಿ ಸದನದಲ್ಲಿ ಪ್ರತಿಕ್ರಿಯೆ ನೀಡದೆ, ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಅವರು ಯಾವುದಾದರೂ ಸದಸ್ಯರು ಅನುಚಿತ ವರ್ತನೆ, ಕೆಟ್ಟ ಪದಗಳನ್ನು ಬಳಸಿದರೆ ಆ ಸದಸ್ಯರನ್ನು ಅಮಾನತುಗೊಳಿಸುವ ಅಧಿಕಾರ ಹೊಂದಿದ್ದಾರೆ. ಆದರೆ ಈಗ ಅಮಾನತು ಆಗಿರುವ ಸದಸ್ಯರ ಪೈಕಿ ಯಾರಾದರೂ ಈ ರೀತಿ ನಡೆದುಕೊಂಡಿದ್ದಾರಾ? 2001ರ ದಾಳಿ ವೇಳೆ ಸೋನಿಯಾ ಗಾಂಧಿ ಸದನದಲ್ಲಿ ವಿಚಾರ ಪ್ರಸ್ತಾಪ ಮಾಡಿದಾಗ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉತ್ತರ ನೀಡಿದ್ದರು ಎಂದು ಉಗ್ರಪ್ಪ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಮಾತನಾಡಿ, ಸಂಸತ್ತನ್ನು ಬಿಜೆಪಿಯ ಕಚೇರಿಯಂತೆ ಬಳಸಿಕೊಳ್ಳುತ್ತಿರುವುದನ್ನು ದೇಶದ ಪ್ರತಿಯೊಬ್ಬ ಪ್ರಜೆ ಖಂಡಿಸಬೇಕು. ಸಂಸತ್ ಸದಸ್ಯರಿಗೆ ಭದ್ರತೆ ನೀಡಲಾಗದ ಸರಕಾರ ಇದು. ಪ್ರಧಾನಮಂತ್ರಿ ಈ ದಾಳಿ ಬಗ್ಗೆ ಉತ್ತರ ನೀಡಬೇಕಾಗುತ್ತದೆ ಎಂದು ಸಂಸತ್ತಿಗೆ ಬರುತ್ತಿಲ್ಲ. ಮೋದಿ ಇದ್ದರೆ ಮಾತ್ರ ದೇಶಕ್ಕೆ ಭದ್ರತೆ ಎಂದು ಹೇಳುತ್ತಿದ್ದರು. ಆದರೆ ಈ ಭದ್ರತಾ ವೈಫಲ್ಯದ ಬಗ್ಗೆ ಅವರೆ ಮೌನವಾಗಿದ್ದಾರೆ ಎಂದು ಟೀಕಿಸಿದರು.

ನಿರುದ್ಯೋಗದಿಂದ ಬೇಸತ್ತು ಬಿಜೆಪಿ ಬೆಂಗಲಿಗರೇ ಸಂಸತ್ ಮೇಲೆ ದಾಳಿ ಮಾಡಿದ್ದಾರೆ. ಮೋದಿ ಮೇಲೆ ಯಾರು ಅಪಾರ ನಿರೀಕ್ಷೆ ಹೊಂದಿದ್ದರೋ ಅವರಿಗೆ ಭ್ರಮನಿರಸವಾಗಿ ಪ್ರತಾಪ್ ಸಿಂಹ ಅವರ ಪಾಸ್ ಮೂಲಕ ಪ್ರಧಾನಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಎಂದು ಚಂದ್ರಪ್ಪ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News