ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟುಗೆ 'ಬಿ ರಾಚಯ್ಯ ದತ್ತಿ ಪ್ರಶಸ್ತಿ'

Update: 2023-07-11 17:32 GMT

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

ಬೆಂಗಳೂರು, ಜು. 11: ‘ಕರ್ನಾಟಕ ರಾಜ್ಯ ಎಸ್‍ಟಿ-ಎಸ್‍ಟಿ ಪತ್ರಿಕಾ ಸಂಪಾದಕರ ಸಂಘದಿಂದ ನೀಡುವ 2022-23ನೆ ಸಾಲಿನ ರಾಜ್ಯಮಟ್ಟದ ‘ಬಿ.ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ'ಗೆ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.

ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತ, ದಮನಿತರ ಪರವಾಗಿ ವೃತ್ತಿಪರತೆಯಿಂದ ದುಡಿದಂತಹ ಹಿರಿಯ ಪತ್ರಕರ್ತರೊಬ್ಬರನ್ನು ಗುರುತಿಸಿ ಪ್ರತಿವರ್ಷ ಹಿರಿಯ ಮುತ್ಸದ್ದಿ, ರಾಜಕಾರಣಿ ‘ಬಿ.ರಾಚಯ್ಯ’ ಅವರ ಹೆಸರಿನಲ್ಲಿ ಸಂಘದಲ್ಲಿ ಸ್ಥಾಪಿಸಿರುವ ರಾಜ್ಯ ಮಟ್ಟದ ದತ್ತಿನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಮಾಧ್ಯಮ ಕ್ಷೇತ್ರದಲ್ಲಿ ದಲಿತರು-ದಮನಿತರ ಪರವಾಗಿ ಅಹರ್ನಿಶಿ ದುಡಿಯುತ್ತಿರುವ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 10ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಕರ್ನಾಟಕ ರಾಜ್ಯ ಎಸ್‍ಟಿ-ಎಸ್‍ಟಿ ಪತ್ರಿಕಾ ಸಂಪಾದಕರ ಸಂಘವು ತಿಳಿಸಿದೆ.

ಅದೇ ರೀತಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಎಸ್‍ಸಿ-ಎಸ್‍ಟಿ ಸಮುದಾಯದ ಮೂವರು ಹಿರಿಯ ಸಂಪಾದಕರಿಗೆ ನೀಡಲಾಗುವ ‘ವಾರ್ಷಿಕ ಪ್ರಶಸ್ತಿ’ಗೆ ಕೋಲಾರದ ಸಿ.ಮುನಿಯಪ್ಪ, ಚಿತ್ರದುರ್ಗದ ಮೈಲಾರಪ್ಪ ಮತ್ತು ಬೀದರ್‍ನ ಮಾಳಪ್ಪ ಅಡಸಾರೆ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 5ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

ಇದೇ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಚೆಲುವರಾಜು ಮತ್ತು ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೆರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News