ʼಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕʼ: ಸಂಪುಟದ ನಿರ್ಧಾರಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಸ

Update: 2024-01-18 14:40 GMT

ಬೆಂಗಳೂರು: ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಂಪುಟ ಸಭೆ ನಿರ್ಧರಿಸಿರುವುದನ್ನು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸ್ವಾಗತಿಸಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಸವಣ್ಣರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಚಿವ ಸಂಪುಟ ಸರ್ವಾನುಮತದಿಂದ ಅಂಗೀಕಾರ ನೀಡಿದೆ. ಇದಕ್ಕಾಗಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಎಲ್ಲ ಸಂಪುಟ ಸಚಿವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಸಮ ಸಮಾಜದ ಕಲ್ಪನೆಯ ಜೊತೆಗೆ ಮಹಿಳೆಯರಿಗೆ ಸಮಾನ ಗೌರವ ಸ್ಥಾನ ನೀಡಲು ಹೋರಾಟ ನಡೆಸಿದ, ಜಾತಿಯತೆಯ ನಿರ್ಮೂಲನೆಗೆ 12ನೇ ಶತಮಾನದಲ್ಲೇ ಕ್ರಾಂತಿ ಮಾಡಿದ ಮತ್ತು ತಮ್ಮ ವಚನಗಳ ಮೂಲಕ ಜಗತ್ತಿನ ಕಣ್ಣು ತೆರೆಸಿದ ಬಸವಣ್ಣರನ್ನು ಈ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ರಾಜ್ಯದ ಎಲ್ಲರಿಗೂ ಹರ್ಷ ತಂದಿದೆ ಎಂದು ಅವರು ಹೇಳಿದರು.

ಡಿಸೆಂಬರ್ ನಲ್ಲಿ ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಹಾಗೂ ನೂರಾರು ಮಠಗಳ ಪೀಠಾಧ್ಯಕ್ಷರು, ಹರ-ಚರ ಗುರುಮೂರ್ತಿಗಳ ಸಮ್ಮುಖದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಸಮ್ಮೇಳನದಲ್ಲಿ ಬಸವಣ್ಣರನ್ನು ಈ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ನಿರ್ಣಯ ಮಾಡಲಾಗಿತ್ತು ಎಂದು ಅವರು ಹೇಳಿದರು.

ನಂತರ ಜ.8ರಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು, ಗದುಗಿನ ತೋಂಟದಾರ್ಯ ಸಿದ್ದರಾಮ ಸ್ವಾಮಿ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು, ಸಚಿವರು, ಸಾಹಿತಿಗಳನ್ನೊಳಗೊಂಡ ಸರ್ವ ಸಮುದಾಯದ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಿತ್ತು ಎಂದು ಈಶ್ವರ್ ಖಂಡ್ರೆ ತಿಳಿಸಿದರು.



Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News