ಬೆಂಗಳೂರು: ಪ್ರತಿಷ್ಠಿತ ಬ್ರಾಂಡ್‍ನ ಹೆಸರಿನಡಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರುತ್ತಿದ್ದ ಗೋದಾಮುಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಬೊಮ್ಮನಹಳ್ಳಿ ಮತ್ತು ಕೆ.ಆರ್.ಮಾರ್ಕೆಟ್ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಬ್ರಾಂಡ್‍ನ ಹೆಸರಿನಡಿ ನಕಲಿ ಬಟ್ಟೆಗಳನ್ನು ತಯಾರಿಸಿ ಮಾರುತ್ತಿದ್ದ ವ್ಯಾಪಾರಸ್ಥರ ಅಂಗಡಿ, ಗೋದಾಮುಗಳ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತ ಖಚಿತ ಮಾಹಿತಿ ಮೇರೆಗೆ ಬೊಮ್ಮನಹಳ್ಳಿಯ ಪಟೇಲ್ ಎಕ್ಸ್ ಪರ್ಟ್ ಹಾಗೂ ಆರ್.ಬಿ. ಫ್ಯಾಷನ್ ಗೋದಾಮುಗಳ ಮೇಲೆ ದಾಳಿ ಮಾಡಿದ ಸಿಸಿಬಿ, 1.5 ಕೋಟಿ ರೂಪಾಯಿ ಮೌಲ್ಯದ ನಕಲಿ ಬಟ್ಟೆಗಳು, ಇನ್ನಿತರೆ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಭರತ್ ಕುಮಾರ್, ರಾಧ ಎಂಬವರ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಮಾನಿ, ಬರ್ಬರಿ, ಗ್ಯಾಂಟ್ ಸೇರಿದಂತೆ ಹೆಸರಾಂತ ಕಂಪೆನಿಗಳ ಬಟ್ಟೆ ಎಂದು ಗ್ರಾಹಕರನ್ನು ನಂಬಿಸುತ್ತಿದ್ದ ಆರೋಪಿಗಳು ಅಕ್ರಮ ಮಾರಾಟದಲ್ಲಿ ತೊಡಗಿದ್ದರು. ಪರಿಶೀಲನೆಯ ವೇಳೆ ಎಸ್.ಆರ್.ನಗರ, ಮಾಗಡಿ ರೋಡ್, ಬೇಗೂರು ಸೇರಿದಂತೆ ಗೋದಾಮುಗಳಲ್ಲಿ ಪ್ರತಿಷ್ಠಿತ ಬ್ರಾಂಡ್ ಹೆಸರಿನಡಿ ನಕಲಿ ಬಟ್ಟೆಗಳನ್ನು ಸಿದ್ದಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ.
ಕೆ.ಆರ್.ಮಾರ್ಕೆಟ್ ಬಳಿ ಸ್ರೀಕೇಟ್ ಚೇಂಬರ್ : ಕೆ.ಆರ್.ಮಾರ್ಕೆಟ್ ಬಳಿ ನಡೆದ ಸಿಸಿಬಿ ದಾಳಿ ವೇಳೆ ಸೀಕ್ರೆಟ್ ಚೇಂಬರ್ ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ನಕಲಿ ಸಿಗರೇಟ್‍ಗಳು ಪತ್ತೆಯಾಗಿವೆ. ಪ್ರತಿಷ್ಠಿತ ಐಟಿಸಿ ಬ್ರಾಂಡ್ ಸಹ ನಕಲಿ ಮಾಡಲಾಗಿದೆ. ಬ್ಲಾಕ್, ಮಾಂಡ್, ಸಿಗರ್ ಎಸ್ಸೆಲೈಟ್ಸ್ ಸೇರಿ ಹಲವಾರು ವಿದೇಶಿ ಬ್ರಾಂಡ್‍ಗಳು ನಕಲಿ ಮಾಡಿ ಮಾರಾಟ ಮಾಡಲಾಗುತ್ತಿತ್ತು.
ನಗರದ ವಿವಿಧ ಬೀಡಾ ಸ್ಟಾಲ್ ಪಾನ್ ಶಾಪ್‍ಗಳಿಗೆ ಈ ನಕಲಿ ಬ್ರಾಂಡ್ ಸಿಗರೇಟ್‍ಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ಆರೋಪಿಗಳ ಬಳಿ ಅಕ್ರಮ ಹುಕ್ಕಾ ಜಾರ್ ಗಳು ಪತ್ತೆಯಾಗಿದ್ದು, ಘಟನೆ ಸಂಬಂಧ ಲಲಿತ್ ಎಂಬಾತನ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗೊತ್ತಾಗಿದೆ.