ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ
Update: 2025-03-03 20:57 IST

ಬೆಂಗಳೂರು : ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ ಬಿಜೆಪಿ ನಿಯೋಗವು ಇಂದು (ಸೋಮವಾರ) ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ವಿಧಾನಪರಿಷತ್ತಿನ ಸದಸ್ಯರಾದ ಎನ್.ರವಿಕುಮಾರ್, ಶಶೀಲ್ ನಮೋಶಿ, ಹನುಮಂತ ನಿರಾಣಿ, ಡಿ.ಎಸ್.ಅರುಣ್, ಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ.ಸಿ.ಬಿ.ಶಶಿಧರ್, ರಾಜ್ಯ ಸಹ ಸಂಚಾಲಕರಾದ ಎಂ.ಜಿ.ಭಟ್, ಹರೀಶ್.ಕೆ, ಡಾ.ರಾಘವೇಂದ್ರ ಹಾಗೂ ಅಶ್ವಿನಿ ಶಂಕರ್ ಅವರ ನಿಯೋಗವು ಈ ಮನವಿ ಸಲ್ಲಿಸಿತು.
9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವು ಅವೈಜ್ಞಾನಿಕ, ಅಸಾಂವಿಧಾನಿಕ ಮಾತ್ರವಲ್ಲದೆ ಇದೊಂದು ಅನ್ಯಾಯದ ನಿರ್ಧಾರ ಎಂದು ರಾಜ್ಯಪಾಲರ ಗಮನ ಸೆಳೆಯಲಾಯಿತು.
ರಾಜ್ಯ ಸರಕಾರದ ಈ ಕ್ರಮವನ್ನು ತಕ್ಷಣ ಹಿಂಪಡೆದುಕೊಳ್ಳುವಂತೆ ಸೂಚಿಸಿ, ಸೂಕ್ತ ನಿರ್ಧಾರ ಕೈಗೊಂಡು ಲಕ್ಷಾಂತರ ಗ್ರಾಮೀಣ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕೆಂದು ನಿಯೋಗವು ಮನವಿ ವಿನಂತಿಸಿದೆ.