ಕಾಂಗ್ರೆಸ್ ನಿರ್ನಾಮ ಮಾಡುವ ಉದ್ದೇಶದಿಂದ ಬಿಜೆಪಿ -ಜೆಡಿಎಸ್ ಮೈತ್ರಿ: ಕೆ.ಎಸ್.ಈಶ್ವರಪ್ಪ

Update: 2023-09-09 07:01 GMT

ಶಿವಮೊಗ್ಗ, ಸೆ.9:ಕಾಂಗ್ರೆಸ್ ನಿರ್ನಾಮ ಮಾಡುವ ಉದ್ದೇಶದಿಂದ ಬಿಜೆಪಿ -ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಕಾಂಗ್ರೆಸ್ ಬೇಡ ಎಂದು ಜನ ತೀರ್ಮಾನ ಮಾಡಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಗಳೆಲ್ಲರೂ ಕೂಡ ಒಟ್ಟಾಗಬೇಕು.ಕಾಂಗ್ರೆಸ್ ನಿರ್ನಾಮ ಮಾಡ್ಬೇಕೆಂಬ ಉದ್ದೇಶದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ. ಲೋಕಸಭಾ ಚುನಾವಣೆ ತಾ.ಪಂ,ಗ್ರಾ.ಪಂ, ಚುನಾವಣೆಯಂತಲ್ಲ.ಲೋಕಸಭಾ ಚುನಾವಣೆ ಅಂದ್ರೇ ದೇಶವನ್ನು ಉಳಿಸುವ ಚುನಾವಣೆಯಾಗಿದೆ.ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿ,ಯಶಸ್ಸು ಗಳಿಸುತ್ತೇವೆ ಎಂದರು.

ಈ ಹಿಂದೆ ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಲಾಭ ಗಳಿಸಿತ್ತು.ಜೊತೆಗೆ ಕಳೆದ ಚುನಾವಣೆ ವೇಳೆ ರಾಜ್ಯದಲ್ಲಿ ಒಂದು ಸ್ಥಾನ ಸಹ ಗೆದ್ದಿತ್ತು. ಈ ಬಾರಿ 1ಸ್ಥಾನ ಕಾಂಗ್ರೆಸ್ ಗೆ ಕೊಡಬಾರದು ಎಂದು ತೀರ್ಮಾನ ಮಾಡಿದ್ದೇವೆ.ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಒಂದು ಸೀಟನ್ನ ಕಾಂಗ್ರೆಸ್‌ಗೆ ಕೊಡಬಾರದು ಎಂಬುದು ರಾಜ್ಯದ ಜನರ ಅಪೇಕ್ಷೆಯಾಗಿದೆ.ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಬಿಜೆಪಿ ಎರಡು ಸೀಟು ಕೂಡ ಬರಲ್ಲ ಅಂತ ಹೇಳಿಕೆ ನೀಡಿದ್ದರು.ಕಾಂಗ್ರೆಸ್‌ಗೆ ಒಂದೇ ಸೀಟು ಬಂದಿತ್ತು, ಬಿಜೆಪಿ 25 ಸೀಟು ಗೆದ್ದಿತ್ತು.ಕಾಂಗ್ರೆಸ್ ವ್ಯಕ್ತಿಗತ ಯೋಚನೆ ಮಾಡುತ್ತೆ. ನಾವು ದೇಶಕ್ಕಾಗಿ ಯೋಚನೆ ಮಾಡ್ತೇವೆ.ಬಿಜೆಪಿಗೆ ಯಾವುದೇ ಭಯವಿಲ್ಲ. ಚುನಾವಣೆ ನಂತರ ಉತ್ತರ ಸಿಗುತ್ತದೆ ಎಂದರು.

ಪಕ್ಷದಿಂದ ಹೊರ ಹೋಗುವವರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಒಂದು ಕೋಟಿ ಸದಸ್ಯರಿದ್ದಾರೆ. ಎಲ್ಲರೂ ನಿಷ್ಠಾವಂತ ಕಾರ್ಯಕರ್ತರೇ ಎಂದರು.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News