ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯದ ಜನರ ಆಶೀರ್ವಾದ ಲಭಿಸಿದೆ : ಬಿ.ವೈ.ವಿಜಯೇಂದ್ರ

Update: 2024-06-22 10:49 GMT

ಬೆಂಗಳೂರು : ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯದ ಜನರ ಆಶೀರ್ವಾದ ಲಭಿಸಿದೆ. ರಾಜ್ಯದಲ್ಲಿ 19 ಜನ ಎನ್‍ಡಿಎ ಸಂಸದರ ಆಯ್ಕೆಗೆ ಕಾರಣಕರ್ತರಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ 19 ಜನ ಎನ್‍ಡಿಎ ಸಂಸದರ ಸನ್ಮಾನ, ರಾಜ್ಯದ ಕೇಂದ್ರ ಸಚಿವರ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಕಾಂಗ್ರೆಸ್ ಪಕ್ಷದ ಸಾಕಷ್ಟು ಅಪಪ್ರಚಾರದ ನಡುವೆ, ಆಮಿಷಗಳ ನಡುವೆ ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದ ನೂತನ ಸಂಸದರಿಗೆ ಅಭಿನಂದನೆಗಳು. ಹಿಂದೆ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷ ಈಗ 9 ಸ್ಥಾನ ಗೆದ್ದಿರಬಹುದು. ಆದರೆ, ಮತ್ತೊಂದು ಕಡೆ ರಾಜ್ಯದಲ್ಲಿ 145ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುನ್ನಡೆ ಸಾಧಿಸಿವೆ. ಕಾಂಗ್ರೆಸ್ ಸಚಿವರಿರುವ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಲೀಡ್ ಪಡೆದಿದ್ದಾರೆ" ಎಂದು ವಿವರಿಸಿದರು.

ಕಾಂಗ್ರೆಸ್ ದುರಾಡಳಿತದಿಂದ ರಾಜ್ಯಕ್ಕೆ ಹಿನ್ನಡೆ :

"ಮುಂದಿನ 4 ವರ್ಷ ರಾಜ್ಯದ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿತ್ತು. ಆದರೆ, ಕಳೆದ ಒಂದು ವರ್ಷದ ಕಾಂಗ್ರೆಸ್ ದುರಾಡಳಿತದಲ್ಲಿ ರಾಜ್ಯವು ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಸಾಧಿಸುವಂತಾಗಿದೆ" ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ʼಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ವೈಫಲ್ಯವನ್ನು ಮುಚ್ಚಿಡಲು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಕಾಂಗ್ರೆಸ್ ಶಾಸಕ ನಾಡಗೌಡರು ಅಭಿವೃದ್ಧಿ ಇಲ್ಲದ ಕಾರಣಕ್ಕೆ ನಿವೃತ್ತಿ ಪಡೆಯುವ ಮಾತನಾಡಿದ್ದಾರೆʼ ಎಂದರು.

 ಆದಾಯ ಮೂಲ ಹೆಚ್ಚಿಸಲು ಬೆಲೆ ಏರಿಕೆ :

ಗ್ಯಾರಂಟಿ ನೆಪದಲ್ಲಿ ಆದಾಯ ಮೂಲ ಹೆಚ್ಚಿಸಲು ಬೆಲೆ ಏರಿಕೆ ಮಾಡುತ್ತಿದ್ದಾರೆ. ರೈತರು ಬರಗಾಲದಿಂದ ಸಂಕಷ್ಟದಲ್ಲಿದ್ದರೂ, ಕೇಂದ್ರದಿಂದ 3,500 ಕೋಟಿ ಬರ ಪರಿಹಾರ ಕೊಟ್ಟರೂ ಸಹ ರಾಜ್ಯ ಸರಕಾರವು ರೈತರಿಗೆ ಸ್ಪಂದಿಸಿಲ್ಲ ಎಂದು ಟೀಕಿಸಿದರು.

ಆಸ್ತಿ ತೆರಿಗೆ ಹೆಚ್ಚಳ, ನೋಂದಣಿ ಶುಲ್ಕ ಏರಿಕೆ, ಮೋಟಾರು ವಾಹನ ತೆರಿಗೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಹಾಲಿನ ದರ ಜಾಸ್ತಿ ಮಾಡಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಕಾಂಗ್ರೆಸ್ ಸರಕಾರ ಬಡವರ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರಿಗೆ ಬರೆ ಎಳೆಯುವ ಸರಕಾರ ಇದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News