ಫೆ.27ರಿಂದ ಮಾ.3ರ ವರೆಗೆ ‘ವಿಧಾನಸೌಧದಲ್ಲಿ ಪುಸ್ತಕ ಮೇಳ’: ಸ್ಪೀಕರ್ ಯು.ಟಿ.ಖಾದರ್

Update: 2025-02-24 20:01 IST
Photo of UT Khader

ಸ್ಪೀಕರ್ ಯು.ಟಿ.ಖಾದರ್ 

  • whatsapp icon

ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಫೆ.27ರಿಂದ ಮಾ.3ರ ವರೆಗೆ ‘ಪುಸ್ತಕ’ ಪ್ರದರ್ಶನ ಮತ್ತು ಮಾರಾಟ ಮೇಳ’ ಆಯೋಜಿಸಲಾಗುತ್ತಿದ್ದು, ಫೆ.27ರಿಂದ ಮಾ.2ರ ವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಮೊದಲ ಮಹಡಿಯಲ್ಲಿನ ಸಮಿತಿ ಕೊಠಡಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಫೆ.27ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಸ್ತಕ ಮೇಳವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹಾಗೂ ಗೋವಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ್ ಮೌಜೊ ಭಾಗವಹಿಸಲಿದ್ದಾರೆ ಎಂದರು.

ಫೆ.27ರಿಂದ ಮಾ.3ರ ವರೆಗೆ ಮೇಳ ಆಯೋಜನೆ ಮಾಡಲಾಗಿದ್ದು, ಪ್ರತಿದಿನ ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮಾ.2ರ ಸಂಜೆ ನಟ, ನಿರ್ದೇಶಕ ಸಾಧುಕೋಕಿಲ ಅವರಿಂದ ಸಂಗೀತ ಸಂಜೆ ಆಯೋಜಿಸಲಾಗುವುದು. ಪ್ರತಿದಿನ ಕವಿಗೋಷ್ಠಿಗಳು ನಡೆಯಲಿವೆ ಎಂದು ಯು.ಟಿ. ಖಾದರ್ ಹೇಳಿದರು.

ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಲಿದೆ. ಫೆ.28ರ ಬೆಳಗ್ಗೆ 11ಕ್ಕೆ ‘ದ್ಯಶ್ಯ ಮತ್ತು ಮುದ್ರಣ ಮಾಧ್ಯಮಗಳ ಜವಾಬ್ದಾರಿ’ ವಿಷಯ ಕುರಿತು ಪತ್ರಕರ್ತರಾದ ರವೀಂದ್ರ ಭಟ್, ಪ್ರಮೋದ್ ಶಾಸ್ತ್ರಿ, ಹರಿಪ್ರಸಾದ್ ಅವರಿಂದ ಸಂವಾದ ಹಾಗೂ ವಿಶ್ವೇಶ್ವರ ಭಟ್, ಸಾವಣ್ಣ ಪ್ರಕಾಶನದ ಪ್ರಕಾಶಕ ಕರೀಂ ಹಾಗೂ ಆಕೃತಿ ಪುಸ್ತಕ ಸಂಸ್ಥೆಯ ಬಿ.ಎಂ.ಗುರುಪ್ರಸಾದ್ ಅವರು ‘ಸಮಕಾಲೀನ ಪ್ರಕಾಶನ ಕ್ಷೇತ್ರದ ಸವಾಲುಗಳು’ ಕುರಿತು ಸಂವಾದ ನಡೆಸಲಿದ್ದಾರೆ ಎಂದು ಯು.ಟಿ.ಖಾದರ್ ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ಕ್ಯಾಪ್ಟನ್ ಗೋಪಿನಾಥ್, ಬಡಗಲಪುರ ನಾಗೇಂದ್ರ, ಚಿದಾನಂದ ಪಟೇಲ್ ಅವರಿಂದ ‘ನಾಯಕತ್ವ ಇಂದು ಮತ್ತು ನಾಳೆ’ ಕುರಿತು ಹಾಗೂ ಕೃಷಿ ಸಂಶೋಧಕರಾದ ಕೆ.ಎನ್.ಗಣೇಶಯ್ಯ, ಶ್ರೀಮತಿ ಹರಿಪ್ರಸಾದ್, ಕಿರಣ್‍ಕುಮಾರ್ ಅವರಿಂದ ‘ನೆಲದ ಮೂಲದಿಂದ ಅಂತರಿಕ್ಷದ ವರೆಗೆ’ ಕುರಿತು ಸಂವಾದ ನಡೆಯಲಿದೆ ಎಂದು ಯು.ಟಿ.ಖಾದರ್ ಹೇಳಿದರು.

ಮಾ.1ರ ಬೆಳಗ್ಗೆ 11ಕ್ಕೆ ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಲಿಕರ್, ಶಿವಾನಂದ ಕಳವೆ ಅವರಿಂದ ‘ಪರಿಸರ ಅಳಿವು-ಉಳಿವು’ ಕುರಿತು ಹಾಗೂ ನ್ಯಾಯಮೂರ್ತಿ ನಾಗಮೋಹನದಾಸ್, ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ, ಶಶಿಕಲ ಗುರುಪುರ್ ಅವರಿಂದ ‘ಸಂವಿಧಾನ ಹಿರಿಮೆ ಗರಿಮೆ ಹಾಗೂ ಅರಿವು’ ಕುರಿತು ಸಂವಾದ ನಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಮಧ್ಯಾಹ್ನ 3 ಗಂಟೆಗೆ ಜೋಸೆಫ್ ಹೂವಾರ್ ಮಾಲತಿ ಹೊಳ್ಳ, ಪೊನ್ನಪ್ಪ, ಅರ್ಜುನ್ ದೇವಯ್ಯ, ಚಂದ್ರಮೌಳಿ ಕಣವಿ ಅವರಿಂದ ‘ಕ್ರೀಡೆ ಮತ್ತು ಸಾಹಿತ್ಯ’ ಕುರಿತು ಹಾಗೂ ಡಾ.ಅನಂತಪ್ರಭು, ಡಾ.ಪ್ರಣಬ್ ಮೊಹಾಂತಿ, ಡಾ.ರಮೇಶ್ ನಿಂಬೆಮರದಳ್ಳಿ ಅವರಿಂದ ‘ಕೃತಕ ಬುದ್ದಿಮತ್ತೆ/ಸೈಬರ್ ಸೆಕ್ಯುರಿಟಿ’ ಕುರಿತು ಸಂವಾದ ನಡೆಯಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಮಾ.2ರ ಬೆಳಗ್ಗೆ 11ಕ್ಕೆ ಬಾನು ಮುಷ್ತಾಕ್, ಡಾ.ಮಹೇಶ ಜೋಶಿ, ಡಾ.ಡಿ.ಡೊಮಿನಿಕ್ ಅವರಿಂದ ‘ಕನ್ನಡ ಸಾಹಿತ್ಯದಲ್ಲಿ ಸರ್ವಸಮಭಾವದ ಚಿಂತನೆಗಳು’ ಕುರಿತು ಹಾಗೂ ಉದಯಗಾಂವ್‍ಕರ್, ಪ್ರೊ.ಬಿಳಿಗೆರೆ ಕೃಷ್ಣಮೂರ್ತಿ, ಲಲಿತಾ ಹೊಸಪೇಟಿ ಅವರಿಂದ ‘ಮಕ್ಕಳ ಸಾಹಿತ್ಯ’ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಯು.ಟಿ.ಖಾದರ್ ಹೇಳಿದರು.

ಮಾ.2ರ ಮಧ್ಯಾಹ್ನ 1ರಿಂದ 2.30 ಗಂಟೆಯ ವರೆಗೆ ಡಾ.ಮಹಾಂತೇಶ್ ರಾಮಣ್ಣವರ್, ಡಾ.ಆಶಿಶ್ ಸೀತನಾಡಿ, ಡಾ.ಸುನೀತಾರಾವ್ ಅವರಿಂದ ‘ಅಂಗಾಂಗ ದಾನದ ಅರಿವು’ ಕುರಿತು ಹಾಗೂ ಮಧ್ಯಾಹ್ನ 3 ಗಂಟೆಗೆ ಸಾಹಿತಿ ಡಾ.ದೊಡ್ಡರಂಗೇಗೌಡ, ಟಿ.ಎನ್.ಸೀತಾರಾಮ್, ಪ್ರೊ.ಎನ್.ಎಸ್.ಶ್ರೀಧರಮೂರ್ತಿ, ಪಿ.ಶೇಷಾದ್ರಿ, ಅವರಿಂದ ‘ಸಾಹಿತ್ಯ ಮತ್ತು ಚಲನಚಿತ್ರ’ ಕುರಿತು ನರಹಳ್ಳಿ ಬಾಲಸುಬ್ರಮಣ್ಯಂ, ಎಚ್.ಎಲ್.ಪುಷ್ಪ, ಡಾ.ಸಿದ್ದನಗೌಡ ಪಾಟೀಲ್ ಅವರಿಂದ ‘ಓದಿನ ಸುಖ’ ಕುರಿತು ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯು.ಟಿ.ಖಾದರ್ ವಿವರಿಸಿದರು.

ಪ್ರತಿ ಭಾಷಾ ಅಕಾಡಮಿಗಳಿಗೆ ಪ್ರತ್ಯೇಕ ಕೌಂಟರ್ ನೀಡಲಾಗುವುದು. ಹೊಸದಾಗಿ ಪುಸ್ತಕಗಳನ್ನು ಬರೆದವರಿಗೆ ಹೊಸ ಸ್ಟಾಲ್ ನೀಡಲಾಗುವುದು. ಪುಸ್ತಕ ಮೇಳ ವೀಕ್ಷಿಸಲು ಬರುವ ಶಾಲಾ ವಿದ್ಯಾರ್ಥಿಗಳಿಗೆ ವಿಧಾಸೌಧದ ಸಭಾಂಗಣ ವೀಕ್ಷಣೆಗೂ ಸಹ ಅವಕಾಶ ಕಲ್ಪಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.

ಶಾಸಕರು ತಮ್ಮ ನಿಧಿಯಿಂದ 2 ಲಕ್ಷ ರೂ.ಗಳ ವರೆಗೆ ಪುಸ್ತಕಗಳನ್ನು ಖರೀದಿಸಿ ತಮ್ಮ ಕ್ಷೇತ್ರದ ಸಾರ್ವಜನಿಕ ಗ್ರಂಥಾಲಯ ಹಾಗೂ ಶಾಲೆಗಳಿಗೆ ಪೂರೈಸಲು ಅವಕಾಶವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಜನರನ್ನು ಸಜ್ಜುಗೊಳಿಸಲು ಅಗತ್ಯವಿರುವ ಪಠ್ಯಪುಸ್ತಕಗಳು ಇರಲಿವೆ. ಪುಸ್ತಕ ಖರೀದಿದಾರರಿಗೆ ರಿಯಾಯಿತಿ ದರದಲ್ಲಿ ಪುಸ್ತಕ ನೀಡಲು ಸೂಚನೆ ನೀಡಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದರು.

ಮಾ.3ರಂದು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರನ್ನು ಮೇಳಕ್ಕೆ ಆಹ್ವಾನಿಸಲಾಗುವುದು. ಪುಸ್ತಕ ಮೇಳ ಆಯೋಜಿಸಲು ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರುಗಳು ಸಹ ತುಂಬಾ ಸಹಕಾರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಯು.ಟಿ.ಖಾದರ್ ತಿಳಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಉಪಸ್ಥಿತರಿದ್ದರು.

25 ಸರಕಾರಿ, 125 ಖಾಸಗಿ ಸ್ಟಾಲ್‍ಗಳಿಗೆ ಅವಕಾಶ: ಮಾ.3ರಂದು ಶಾಸಕರುಗಳಿಗೆ ಸಚಿವಾಲಯದ ಸಾಹಿತ್ಯಾಸಕ್ತರು, ಪ್ರಕಾಶಕರು, ಓದುಗರು, ಶಾಸಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಒಂದೆಡೆ ಪುಸ್ತಕ ಮೇಳಕ್ಕೆ ಸಾಕ್ಷಿಯಾಗಲಿದ್ದಾರೆ. ಸುಮಾರು 150 ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅದರಲ್ಲಿ 25 ಸರಕಾರಿ ಸ್ಟಾಲ್‍ಗಳು ಹಾಗೂ ಉಳಿದಂತೆ 125 ಸ್ಟಾಲ್‍ಗಳನ್ನು ಖಾಸಗಿಯವರಿಗೆ ಒದಗಿಸಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.

ಇತಿಹಾಸದಲ್ಲೇ ಇದು ಮೊದಲು: ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿದ್ದೇವೆ. ಸರ್ವರಿಗೂ ಇರುವ ವಿಧಾನಸೌಧದಲ್ಲಿ ಪುಸ್ತಕ ಪ್ರಕಾಶಕರನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಿದ್ದೇವೆ. ರಾಜ್ಯದಲ್ಲಿ ಸಾಹಿತ್ಯಕ್ಕೆ ಕೊಡುಗೆ ಕೊಡುವವರು ಪ್ರಕಾಶಕರು ಆಗಿದ್ದಾರೆ. ಪ್ರಕಾಶಕರಿಂದ ಸಾಹಿತ್ಯ ಜನರಿಗೆ ತಲುಪಲಿದೆ. ಈ ಪುಸ್ತಕ ಮೇಳದ ಕೊನೆಯ ದಿನವಾದ ಮಾ.3ರಂದು ಮಾತ್ರ ಅಧಿವೇಶನ ಇರುವ ಕಾರಣ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಯು.ಟಿ.ಖಾದರ್ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News