‘ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಕೃತಿ ಬಿಡುಗಡೆ
ಬೆಂಗಳೂರು: ದೇಶದಲ್ಲಿ ಆರೆಸ್ಸೆಸ್ ಪರಿವಾರವು ಒಂದು ದೇಶ, ಒಂದು ಧ್ವಜ ಎನ್ನುವ ಹಿಟ್ಲರ್ ಸಿದ್ದಾಂತವನ್ನು ಇಟ್ಟುಕೊಂಡು ಬಹುತ್ವವನ್ನು ನಾಶ ಮಾಡಲು ನಿಂತಿದೆ ಎಂದು ಡಾ.ಕೆ.ಶರೀಫಾ ತಿಳಿಸಿದ್ದಾರೆ.
ರವಿವಾರ ನಗರದ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸನಾತನಿಗಳು ಗೌರಿ, ಕಲಬುರ್ಗಿಯನ್ನು ಕೊಂದಿದ್ದಾರೆ. ಕೇವಲ ಮೂರ್ನಾಲ್ಕು ಸಾವಿರ ರೂ.ಗಳಿಗಾಗಿ ಗೌರಿಯನ್ನು ಕೊಂದವರುಯ ಜೈಲಿನಲ್ಲಿದ್ದಾರೆ, ಆದರೆ, ಕೊಲೆ ಮಾಡಿಸಿದವರು ರಾಜ್ಯ, ದೇಶ ಆಳುತ್ತಿದ್ದಾರೆ. ಈಗ ಯಾರು ನಮ್ಮವರು ಎಂದು ತಿಳಿದುಕೊಳ್ಳುವ ಕಾಲ ಬಂದಿದೆ. ನಾವು ಈ ಸಂದರ್ಭದಲ್ಲಿ ಮೌನವಾಗಿ ಕೂರುವುದು ಬೇಡ ಎಂದು ಡಾ.ಕೆ.ಷರೀಫಾ ಹೇಳಿದರು.
ಆರೆಸ್ಸೆಸ್‍ಗೆ ಸಂಬಂಧಿಸಿದಂತೆ ಮೊದಲು ಆರೆಸ್ಸೆಸ್-ವಿಷವೃಕ್ಷ ಎನ್ನುವ ಸಣ್ಣ ಪುಸ್ತಕ ಬಂತು. ಅನಂತರದಲ್ಲಿ ಆರೆಸ್ಸೆಸ್ ಆಳ-ಅಗಲ, ಆರೆಸ್ಸೆಸ್ ಕರಾಳಮುಖ, ದೇಶಕ್ಕಾಗಿ ಆರೆಸ್ಸೆಸ್ ಬಿಟ್ಟೆ ಎಂಬಿತ್ಯಾದಿ ಪುಸ್ತಕಗಳು ಆರೆಸ್ಸೆಸ್ ಸಂಘಟನೆಯ ವಿರುದ್ಧವಾಗಿ ಬಂದಿವೆ. ಈಗ ಆರೆಸ್ಸೆಸ್‍ನಿಂದ ಹೊರಬಂದು ಅದರ ಅನುಭವವನ್ನು ಬರೆದ ಮೊದಲ ಮಹಿಳೆ ಲತಾಮಾಲ ಅವರು ಈ ಕೃತಿಯಲ್ಲಿ ಐದು ಭಾಗಗಳಾಗಿ ವಿವರ ನೀಡಿದ್ದಾರೆ ಎಂದು ಕೆ.ಷರೀಫಾ ತಿಳಿಸಿದರು.
ಆರೆಸ್ಸೆಸ್ ಭ್ರಮೆಯಿಂದ ಹೊರಬಂದಿರುವುದು ಅವರ ಕೃತಿಯ ಮೊದಲ ಭಾಗದಲ್ಲಿದೆ. ಆರೆಸ್ಸೆಸ್–ಹಿಂದುತ್ವದ ವಿಚಾರಗಳು ಎರಡನೇ ಭಾಗದಲ್ಲಿದೆ. ಹಿಂದುತ್ವ ಮಾಡುತ್ತಿರುವ ಅನ್ಯಾಯ, ಜಿಹಾದ್ ಸಹಿತ ಹಿಂದುತ್ವದ ನಿರೂಪಣೆ ಮೂರನೇ ಭಾಗದಲ್ಲಿದೆ. ಪ್ರಭುತ್ವವು ಜನರಿಗೆ ಹಿಂದುತ್ವದ ನಶೆ ಏರಿಸಿ ಸಾರ್ವಜನಿಕ ಸಂಸ್ಥೆಗಳನ್ನು ಹೇಗೆ ಮಾರುತ್ತಿದೆ ಎಂಬುದನ್ನು ನಾಲ್ಕನೇ ಭಾಗದಲ್ಲಿ ನೀಡಿದ್ದಾರೆ. ಇದಕ್ಕೆ ಪರಿಹಾರವೇನು ಎಂಬುದನ್ನು ಕೊನೆಯ ಭಾಗದಲ್ಲಿ ನೀಡಿದ್ದಾರೆ ಎಂದು ಕೆ.ಷರೀಫಾ ವಿವರಿಸಿದರು.
ಲೇಖಕಿ ಆರ್.ಸುನಂದಮ್ಮ ಮಾತನಾಡಿ, ಕುಟುಂಬವಿಲ್ಲ, ಮನೆಯಿಲ್ಲ. ಹಾಗಾಗಿ ಅವರು ದುಡ್ಡು ಮಾಡಲ್ಲ ಎಂದೆಲ್ಲ ‘ವಿಶ್ವಗುರು’ ಬಗ್ಗೆ ನಿರೂಪಣೆಗಳನ್ನು ತುಂಬಲಾಗಿದೆ. ಅವರು ಆರೆಸ್ಸೆಸ್‍ಗೆ ಸುರಿದಿದ್ದಾರೆ. ಹಾಗಾಗಿ ಆರೆಸ್ಸೆಸ್‍ನ ಆಸ್ತಿ ನೂರು ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.
2ಜಿ ಸ್ಪೆಕ್ಟ್ರಂ ಹಗರಣ ನಡೆದಿದೆ ಎಂದು ಬಹಳ ಹೋರಾಟಗಳು ನಡೆದವು. ನ್ಯಾಯಾಲಯದಲ್ಲಿ ಪ್ರಕರಣವೇ ಬಿದ್ದು ಹೋಯಿತು. ಊಹಾಪೋಹದ ಅಂಕಿಅಂಶಗಳನ್ನು ಇಟ್ಟುಕೊಂಡು ನಡೆದ ಹೋರಾಟವು ಸರಕಾರವೇ ಬದಲಾಗುವಷ್ಟು ದೊಡ್ಡ ಪರಿಣಾಮವನ್ನು ಬೀರಿತು. ಆದರೆ, ಈಗ ಲಕ್ಷ ಕೋಟಿ ರೂಪಾಯಿಗಳಲ್ಲಿ ಕಿಕ್ ಬ್ಯಾಕ್ ಪಡೆಯುತ್ತಿರುವ ಭ್ರಷ್ಟಾಚಾರಗಳ ವಿರುದ್ಧ ಯಾವುದೇ ಹೋರಾಟ ನಡೆಯುತ್ತಿಲ್ಲ ಎಂದು ಆರ್.ಸುನಂದಮ್ಮ ಬೇಸರ ವ್ಯಕ್ತಪಡಿಸಿದರು.
ನಿಖರ ಅಂಕಿ ಅಂಶಗಳು ವಸ್ತುಸ್ಥಿತಿಯನ್ನು ತಿಳಿಸುತ್ತವೆ. ಈಗ ಅಂಕಿಅಂಶಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ತಿದ್ದಲು ಒಪ್ಪದ ಅಧಿಕಾರಿಗಳ ಮೇಲೆ ದೂರು, ಕಿರುಕುಳ ನೀಡಲಾಗುತ್ತದೆ. ಜೈಲಿಗೆ ಕಳುಹಿಸಲಾಗುತ್ತದೆ. ಇಂಥ ಅನೇಕ ಮಾಹಿತಿಗಳು ಈ ಕೃತಿಯಲ್ಲಿವೆ. ಯುವಜನರಿಗಷ್ಟೇ ಅಲ್ಲ, ಹಿಂದೆ ಕಾಂಗ್ರೆಸಿಗರಾಗಿದ್ದು, ಮೋದಿ ಮೋಡಿಗೆ ಒಳಗಾಗಿ ಬಿಜೆಪಿಗರಾಗಿರುವ 60 ವರ್ಷ ದಾಟಿದವರಿಗೂ ಈ ಕೃತಿಯನ್ನು ಓದಿಸಬೇಕು ಎಂದು ಆರ್.ಸುನಂದಮ್ಮ ಸಲಹೆ ನೀಡಿದರು.
ಚಿಂತಕ ಶಿವಸುಂದರ್ ಮಾತನಾಡಿ, ಚುನಾವಣೆಗೂ ಮೊದಲು ಆಳುತ್ತಿರುವ ಪಕ್ಷದ ಸಿದ್ದಾಂತವನ್ನು ಅರ್ಥಮಾಡಿಕೊಳ್ಳಬೇಕು. ಪ್ರಜಾತಾಂತ್ರಿಕ ಸಂಸ್ಥೆಗಳನ್ನು ನಾಶ ಮಾಡಿ ನಮ್ಮಲ್ಲಿರುವ ನ್ಯಾಯ ಪ್ರಜ್ಞೆಯನ್ನು ಕೊಂದು ವಿಷವೃಕ್ಷ ಬೆಳೆಸಲಾಗಿದೆ. ನಮಗೆ ಇದರ ಕುರಿತು ಎಚ್ಚರಿಕೆ ಬರಬೇಕಿದೆ ಎಂದರು.
ಸಂಘಪರಿವಾರ ಯುದ್ಧ, ರಾಜಕೀಯಕ್ಕಾಗಿ ಮಾತ್ರವಲ್ಲ ನಮ್ಮ ನಾಗರಿಕತೆಯ ಮೇಲೆ ನಡೆಯುವ ಯುದ್ಧವಾಗಿದೆ. ಹೆಡ್ಗೆವಾರ್, ಸಾವರ್ಕರ್ ಅವರು ಹಿಂದುತ್ವದ ಸಮಾಜ ಕಟ್ಟುತ್ತೇವೆ ಎಂದು ಹೇಳಿದ್ದರು. ಇಂದು ಈ ಹಿಂದುತ್ವ ನಮ್ಮ ದೇಶದ ಬಹುತ್ವನ್ನು ನಾಶಪಡಿಸಲು ಹೊರಟಿದೆ. ಅದನ್ನು ನಾವು ಸೋಲಿಸಬೇಕು ಎಂದು ಶಿವಸುಂದರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಬರಹಗಾರ ಡಾ.ಜಿ.ರಾಮಕೃಷ್ಣ, ಲೇಖಕಿ ಎ.ಆರ್.ವಾಸವಿ, ಗ್ರಾಮೀಣಾಭಿವೃದ್ಧಿ ತಜ್ಞ ಕೆ.ಪಿ.ಸುರೇಶ್, ಕೃತಿಕಾರ್ತಿ ಲತಾಮಾಲ, ಪ್ರಕಾಶಕ ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.