ಬಸ್-‌ ಕಾರು ಢಿಕ್ಕಿ; ದಂಪತಿ ಸ್ಥಳದಲ್ಲೇ ಮೃತ್ಯು

Update: 2023-11-02 15:40 GMT

ತುಮಕೂರು, ನ. 2: ಖಾಸಗಿ ಬಸ್ ಹಾಗೂ ಒಮ್ನಿ ಕಾರು ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಮರಳೂರು ಕೆರೆ ಏರಿ ಮೇಲೆ ಗುರುವಾರ ಸಂಜೆ ವರದಿಯಾಗಿದೆ.

ತಾಲೂಕಿನ ಮಾನಂಗಿ ಗ್ರಾಮದ ನಿವಾಸಿ ಸುರೇಶ್ ಮತ್ತು ಪತ್ನಿ ಸುಮಾ ಎಂಬವರೇ ಮೃತಪಟ್ಟಿರುವ ದಂಪತಿ ಎಂದು ಗರುತಿಸಲಾಗಿದೆ. 

ತುಮಕೂರಿನಿಂದ ಮಾನಂಗಿ ಗ್ರಾಮಕ್ಕೆ ಸುರೇಶ್ ದಂಪತಿ ಒಮ್ನಿ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮರಳೂರು ಕೆರೆ ಏರಿ ಮೇಲೆ ಅತಿ ವೇಗವಾಗಿ ಅಜಾಗರೂಕತೆಯಿಂದ ಬಂದ ಖಾಸಗಿ ಬಸ್ ಒಮ್ನಿ ಕಾರಿಗೆ ಮುಖಾಮುಖಿಯಾಗಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಬಸ್ ನಲ್ಲಿದ್ದ 10ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದಾಗಿ ಮರಳುರು ಕೆರೆ ಏರಿ ಮೇಲೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಮತ್ತು ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗುವ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಘಟನೆಯ ಸುದ್ದಿ ತಿಳಿದ ಕೂಡಲೇ ತುಮಕೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆದು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ನಂತರ ಅಸ್ತವ್ಯಸ್ತಗೊಂಡಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಖಾಸಗಿ ಬಸ್ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News