ಡಾ.ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಚಿವ ಸಂಪುಟ ತೀರ್ಮಾನ : ಎಚ್.ಕೆ.ಪಾಟೀಲ್
ಬೆಂಗಳೂರು : ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪ್ರದೇಶವನ್ನು ನಿಗದಿಗೊಳಿಸಿದೆ ಎಂದು ಹೇಳಿದರು.
ಕೇಂದ್ರ ಸರಕಾರವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಪ್ರಸಕ್ತ ಸಾಲಿನ ಜು.31ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳು ಮತ್ತು ಸಲಹೆಗಳು ಇದ್ದಲ್ಲಿ 60 ದಿನಗಳೊಳಗೆ ಸಲ್ಲಿಸಲು ತಿಳಿಸಿತ್ತು. ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ 20,668 ಚ.ಕಿಮೀ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷ್ಮ ಪ್ರದೇಶವು 19,252.70 ಚ.ಕೀ.ಮೀ ಆಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16,036.72 ಚ.ಕಿ.ಮೀ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇತರ ನಿರ್ಣಯಗಳು: ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್‍ನ 50 ಎಕರೆ ಜಮೀನಿನಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ(ಯುವಿಸಿಇ)ವನ್ನು 500 ಕೋಟಿ ರೂ.ಗಳ ವೆಚ್ಚದಲ್ಲಿ(ರಾಜ್ಯ ಸರಕಾರದ ಪಾಲು 100 ಕೋಟಿ ರೂ.) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ವಿಧಾನಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಘೋಷಿಸಿರುವ ಉಪ ಚುನಾವಣೆಯ ಮಾದರಿ ನೀತಿ ಸಂಹಿತೆ ಕುರಿತು ಚರ್ಚೆ ನಡೆಸಲಾಗಿದೆ. ವಿಧಾನಪರಿಷತ್ತಿಗೆ ರಾಜ್ಯಪಾಲರಿಂದ ಇಬ್ಬರು ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡುವ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಸಿಖ್ ಸಮುದಾಯದ ವಿವಾಹದ ಸಿಂಧುತ್ವದ ಬಗ್ಗೆ ಸಂದೇಹಗಳನ್ನು ನಿವಾರಿಸಲು ಕೇಂದ್ರ ಸರಕಾರವು ದಿ ಆನಂದ್ ಮ್ಯಾರೇಜಸ್ ಕಾಯ್ದೆ 1909 ಅನ್ನು ಜಾರಿಗೆ ತಂದಿದೆ. ಸಿಖ್ ಸಮುದಾಯದ ವಿವಾಹಗಳು ಹಿಂದೂ ವಿವಾಹ ಕಾಯ್ದೆಯ ಪ್ರಕಾರ ನೋಂದಣಿಯಾಗುತ್ತಿವೆ. ವಿವಾಹ ಪ್ರಮಾಣ ಪತ್ರದಲ್ಲಿಯೂ ಹಿಂದು ಧರ್ಮವೆಂದು ನಮೂದಿಸುವುದರಿಂದ ಹೊರದೇಶಕ್ಕೆ ಪ್ರಯಾಣಿಸುವಾಗ ಗೊಂದಲ ಸೃಷ್ಟಿಯಾಗುತ್ತಿದೆ. ಅದಕ್ಕಾಗಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಶಿಫಾರಸ್ಸಿನನ್ವಯ ‘ಕರ್ನಾಟಕ ಆನಂದ್ ವಿವಾಹ ನೋಂದಣಿ ನಿಯಮಗಳು-2024’ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿದುರುಗೂಡು ಗ್ರಾಮದಿಂದ ರಾಜ್ಯ ಹೆದ್ದಾರಿ-57ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 29.35 ಕೋಟಿ ರೂ.ಅಂದಾಜು ಮೊತ್ತದಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹ್ಯಾಟ್-ಹಿಲ್‍ನಲ್ಲಿ ನಿರ್ಮಿಸಿರುವ ನ್ಯಾಯಾಂಗ ಅಧಿಕಾರಿಗಳ ವಸತಿನಿಲಯ ಕಟ್ಟಡಗಳ ನಿರ್ಮಾಣದ ರೂ.11.70 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಕಾರವಾರದ ಡಿಯೋಸಿಸ್ ಎಜುಕೇಶನ್ ಸೊಸೈಟಿಗೆ ಶಿರಸಿ ತಾಲೂಕಿನ ಚಿಪಗಿ ಗ್ರಾಮದಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಿರುವ 5 ಎಕರೆ 12 ಗುಂಟೆ ಜಮೀನನ್ನು ಶೇ.10ರಷ್ಟು ಮಾರ್ಗಸೂಚಿ ದರದನ್ವಯ ಖಾಯಂ ಆಗಿ ಮಂಜೂರು ಮಾಡಲು ನಿರ್ಣಯಿಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ದಕ್ಷಿಣ ತಾಲೂಕಿನ ಹೊಸಕೆರೆಹಳ್ಳಿಯಲ್ಲಿ 20 ಗುಂಟೆ ಜಮೀನನ್ನು ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘಕ್ಕೆ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಕ್ಕಾಗಿ ಹಾಗೂ ರಾಮನಗರದ ಜಿಗೇನಹಳ್ಳಿ ಗ್ರಾಮದಲ್ಲಿ 0-05 ಗುಂಟೆ ‘ಗೋಮಾಳ’ ಜಮೀನನ್ನು ರಾಮನಗರ ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬಿಎಂಟಿಸಿಯು 15ನೆ ಹಣಕಾಸು ಆಯೋಗದ 30 ಕೋಟಿ ರೂ.ಗಳ ಅನುದಾನದಿಂದ 76, 25 ಕೋಟಿ ರೂ. ಅನುದಾನದಿಂದ 51 ಹಾಗೂ ರಾಜ್ಯ ನಗರ ಸಾರಿಗೆ ನಿಧಿ ಅಡಿಯಲ್ಲಿ ಮಂಜೂರಾಗಿರುವ 29.13 ಕೋಟಿ ರೂ.ಗಳ ಅನುದಾನದಿಂದ 21 ಹವಾನಿಯಂತ್ರಣರಹಿತ ಎಲೆಕ್ಟ್ರಿಕ್ ಬಸ್‍ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ರಾಜ್ಯ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ, ಶಾಶ್ವತ ಪರಿಹಾರ ಹಾಗೂ ಪೋಲಾಗಿ ಹರಿದು ಹೋಗುವ ನೀರಿನ ಸದ್ಬಳಕೆ ಯೋಜನೆಯ 200 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
189 ಸರಕಾರಿ ಪ್ರೌಢ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ(ಟಿಎಎಲ್‍ಪಿ) ಮಾದರಿಯ ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್ ನೆಟ್ ಸೌಲಭ್ಯಗಳನ್ನು 14.97 ಕೋಟಿ ರೂ.ಗಳ ಮೊತ್ತದಲ್ಲಿ ಟೆಂಡರ್ ಮೂಲಕ ಖರೀದಿಸಿ ಅನುಷ್ಠಾನಗೊಳಿಸಲು ಹಾಗೂ 74 ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ 40.79 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.