ಜಾತಿ ಗಣತಿಯಿಂದ ಜಾತಿ ದ್ವೇಷ ಸೃಷ್ಟಿ: ಕುಮಾರಸ್ವಾಮಿ

Update: 2023-10-08 16:14 GMT

ಎಚ್.ಡಿ. ಕುಮಾರಸ್ವಾಮಿ 

ಬೆಂಗಳೂರು: ‘ಕಾಂಗ್ರೆಸ್‍ನವರು ಒಂದು ಕಡೆ ಜಾತ್ಯತೀತ ಎನ್ನುತ್ತಾರೆ, ಇನ್ನೊಂದು ಕಡೆ ಜಾತಿ ಗಣತಿ ವರದಿ ಇಟ್ಟುಕೊಂಡು ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ರವಿವಾರ ಬಿಡದಿಯ ತಮ್ಮ ತೋಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರಕಾರವು ರಾಜಕೀಯ ಮಾಡುತ್ತಿದೆ. ಕಾಂತರಾಜು ಎಂಬವರಿಂದ ವರದಿ ಕೊಡಿಸಿದ್ದೀವಿ. ಕುಮಾರಸ್ವಾಮಿ ಒಪ್ಪಲಿಲ್ಲ ಎಂದು ಹಾಲಿ ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿಯನ್ನು ಸ್ವೀಕಾರ ಮಾಡುವುದು ಹೇಗೆ?’ ಎಂದು ಪ್ರಶ್ನಿಸಿದರು.

‘ಮಾತೆತ್ತಿದರೆ ನನ್ನ ಕಡೆ ಬೆರಳು ತೋರಿಸುವ ಅವರು, ಆ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಒಮ್ಮೆಯಾದರೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಿದರಾ? ಇಲ್ಲ, ಪ್ರತಿ ಸಭೆಯಲ್ಲಿಯೂ ಟವೆಲ್ ಕೊಡವಿ ಎದ್ದು ಹೋಗುತ್ತಿದ್ದರು. ಒಮ್ಮೆಯೂ ಈ ಬಗ್ಗೆ ಸಿಎಂ ಆಗಿದ್ದ ನನ್ನ ಬಳಿ 14 ತಿಂಗಳಲ್ಲಿ ಒಮ್ಮೆಯೂ ಚರ್ಚೆ ನಡೆಸಲೇ ಇಲ್ಲ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

‘ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು. ಜಾತಿ ಎನ್ನುವ ಪದ ತೆಗೆದುಹಾಕಿ ಎಂದು ಹೇಳುತ್ತಾರೆ, ಜಾತ್ಯತೀತ ಸಮಾಜ ನಿರ್ಮಾಣ ಮಾಡೋಣ ಎಂದು ಭಾಷಣ ಬಿಗಿಯುತ್ತಾರೆ. ಅದರ ಅರ್ಥವೇನು? ಜಾತ್ಯತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕು ಎಂದಲ್ಲವೇ? ಆದರೆ, ಕಾಂಗ್ರೆಸ್ ಪಕ್ಷಕ್ಕೆ ಜಾತಿ ವ್ಯವಸ್ಥೆ ಎನ್ನುವುದು ವೋಟ್ ಬ್ಯಾಂಕ್ ರಾಜಕೀಯಕ್ಕೆ ಇರುವ ಸಾಧನ ಎಂದು ಅವರು ಟೀಕಿಸಿದರು.

‘ಬಿಜೆಪಿ ಜತೆ ಜೆಡಿಎಸ್ ಮೈತ್ರಿಯ ಬಗ್ಗೆ ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರಕ್ಕೆ ಪೂರ್ಣ ಸಹಮತ ವ್ಯಕ್ತಪಡಿಸಿದ ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News