ಕಾವೇರಿ ನೀರು ವಿಚಾರ: ಕರ್ನಾಟಕ ಬಂದ್ ಗೆ ಚಾಮರಾಜನಗರ ಜಿಲ್ಲೆಯಲ್ಲಿ ಸಂಪೂರ್ಣ ಬೆಂಬಲ

Update: 2023-09-29 04:09 GMT

ಚಾಮರಾಜನಗರ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವ ಹಿನ್ನಲೆಯಲ್ಲಿ ಕರೆ ನೀಡಲಾಗಿರುವ  ಕರ್ನಾಟಕ ಬಂದ್ ಗೆ ಕರ್ನಾಟಕ ತಮಿಳು ನಾಡು ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಯಶಸ್ವಿಯತ್ತ ಸಾಗಿದೆ.

ಚಾಮರಾಜನಗರ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಬೆಳಗ್ಗೆಯಿಂದಲೇ ಕನ್ನಡ ಪರ ಹೋರಾಟಗಾರರು, ರೈತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ರಸ್ತೆಗಿಳಿದು, ಹೆದ್ದಾರಿ ತಡೆಯೊಡ್ಡಿ ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರ, ತಮಿಳುನಾಡು ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಚಾಮರಾಜನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗ ಜಮಾಯಿಸಿದ ಹೋರಾಟಗಾರರು ಧರಣಿ ನಡೆಸಿದರೆ, ಕಾವೇರಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪಾದಯಾತ್ರೆ ಮೂಲಕ ಕಿವಿಯಲ್ಲಿ ಗುಲಾಬಿ ಹೂವಿಟ್ಟುಕೊಂಡು ಬಂದ್ ಸಹಕರಿಸುವಂತೆ ಸಾರ್ವಜನಿಕರಲ್ಲಿ ಹಾಗೂ ವರ್ತಕರಲ್ಲಿ ಮನವಿ ಮಾಡಿದರು.

ಶ್ರೀ ಭುವನೇಶ್ವರಿ ವೃತ್ತದ ಮೂಲಕ ತಮಿಳುನಾಡಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟಗಾರರು ಅರೆ ಬೆತ್ತಲೆಯಾಗಿ ಉರುಳು ಸೇವೆ ಮಾಡಿದರು.

ಈ ನಡುವೆ ಕೆ.ಎಸ್.ಆರ್. ಟಿ.ಸಿ ಬಸ್ ಗಳು ರಸ್ತೆಗಿಳಿಯದೆ ಬಸ್ ನಿಲ್ದಾಣದಲ್ಲೇ ಇದ್ದವು. ಪೊಲೀಸ್ ಪಹರೆ ಹೆಚ್ಚಾಗಿತ್ತು. ಕರ್ನಾಟಕ ಬಂದ್ ವಿಷಯ ಮೊದಲೇ ತಿಳಿದಿದ್ದರಿಂದ ದೂರದೂರಿಗೆ ಹೋಗುವ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬಂದಿರಲಿಲ್ಲ. ತುರ್ತು ಕೆಲಸ ನಿಮಿತ್ತ ತೆರಳುವವರು ಮಾತ್ರ ಬಂದದ್ದು ಕಂಡು ಬಂದಿದೆ.

ಅಂತರಾಜ್ಯ ಗಡಿಯಲ್ಲಿ ಭದ್ರತೆ:

ಕರ್ನಾಟಕ ತಮಿಳುನಾಡು ಗಡಿ ಭಾಗವಾಗಿರುವ ಕಾರ್ಯಪಾಳ್ಯಂ ಬಳಿ ತಮಿಳುನಾಡು ಪೊಲೀಸರನ್ನು ನಿಯೋಜಿಸಲಾಗಿದ್ದು, ಗಡಿಯಿಂದ ಕರ್ನಾಟಕದೊಳಗೆ ಯಾವುದೇ ವಾಹನವನ್ನು ಬಿಡದೇ ತಮಿಳುನಾಡು ಪೊಲೀಸರು ಕಾವಲು ಕಾಯುತ್ತಿದ್ದರು.

ತಮಿಳುನಾಡಿನಿಂದ ತಾಳವಾಡಿಗೆ ಹೋಗುವ ವಾಹನಗಳನ್ನು ದಿಂಬಂ ತಲೈಮಲೆ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದ್ದು,  ಚಾಮರಾಜನಗರ ತಾಲ್ಲೂಕಿನ ಪುಣಜನೂರು ಚಕ್ ಪೋಸ್ಟ್ ಬಳಿ ಕರ್ನಾಟಕ ಪೊಲೀಸರನ್ನು ನಿಯೋಜನೆ ಮಾಡಿದ್ದರಿಂದ ಎರಡೂ ರಾಜ್ಯಗಳ ನಡುವೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

 ಅಂಗಡಿಗಳು ಬಂದ್: ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರಿಂದ ವ್ಯಾಪಾರ ವಹಿವಾಟು ಇಲ್ಲದೆ ಬಿಕೋ ಎನ್ನುತ್ತಿದ್ದವು ಸಾರ್ವಜನಿಕರ ಸಂಚಾರ ವಿರಳವಾಗಿದ್ದರಿಂದ ರಸ್ತೆಯಲ್ಲಿ ಬಿಕೋ ಎನ್ನುವ ಸ್ಥಿತಿ ಇತ್ತು.

ಬಣ್ಣಾರಿ ಚಕ್ ಪೋಸ್ಟ್ ನಲ್ಲೇ ವಾಹನಗಳಿಗೆ ತಡೆ: ತಮಿಳುನಾಡಿನ ಬಣ್ಣಾರಿ ಚಕ್ ಪೋಸ್ಟ್ ನಲ್ಲಿ ಕರ್ನಾಟಕಕ್ಕೆ ತೆರಳುವ ವಾಹನಗಳಿಗೆ ತಡೆ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ತಮಿಳುನಾಡು ಪೊಲೀಸರು ವಹಿಸಿದ್ದರು. ದಿಂಬಂ ತಲೈಮಲೆ ಮೂಲಕ ತಾಳವಾಡಿಯತ್ತ ಸಾಗುವ ವಾಹನಗಳಿಗೆ ಮಾತ್ರ ಬಣ್ಣಾರಿ ಚಕ್ ಪೋಸ್ಟ್ ನಲ್ಲಿ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಬಣ್ಣಾರಿ ಚಕ್ ಪೋಸ್ಟ್ ನಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News