ಸಮವಸ್ತ್ರದಲ್ಲಿ ವಿಡಿಯೋ, ರೀಲ್ಸ್ ಮಾಡಬೇಡಿ : ಸಿಬ್ಬಂದಿಗೆ ಪೊಲೀಸ್ ಆಯುಕ್ತರ ತಾಕೀತು

Update: 2024-07-23 13:54 GMT

ಬಿ.ದಯಾನಂದ್

ಬೆಂಗಳೂರು: ಸಮವಸ್ತ್ರದಲ್ಲಿ ಫೋಟೋ, ವಿಡಿಯೋ, ರೀಲ್ಸ್ ಸೇರಿದಂತೆ ಇಲಾಖೆ ಹಾಗೂ ಪೊಲೀಸ್ ಕರ್ತವ್ಯಗಳಿಗೆ ಸಂಬಂಧಪಡದ ಯಾವುದೇ ವಿಷಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡದಂತೆ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.

ಮಂಗಳವಾರ ಈ ಕುರಿತು ಸೂಚನೆ ನೀಡಿರುವ ಅವರು, ಸಮವಸ್ತ್ರದಲ್ಲಿರುವ ಫೋಟೋ, ರೀಲ್ಸ್, ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಪೊಲೀಸ್ ಇಲಾಖೆಯ ಅಧಿಕೃತ ಕೆಲಸಗಳ ಕುರಿತು ಅನಿಸಿಕೆ ವ್ಯಕ್ತಪಡಿಸುವುದು ಇಲಾಖೆಯ ನಿಯಮ ಮತ್ತು ಪಾಲನೆಗಳಿಗೆ ವಿರುದ್ಧ. ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದ್ದಾರೆ.

ಪೊಲೀಸ್ ಸಮವಸ್ತ್ರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತ. ಆದ್ದರಿಂದ ಯಾವುದೇ ಸಾರ್ವಜನಿಕ ಅಥವಾ ಡಿಜಿಟಲ್ ಫೋರಮ್‌ನಲ್ಲಿ ಇದರ ಬಳಕೆ ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕು. ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮ(ನಡತೆ) ಪ್ರಕಾರ ಯಾವುದೇ ಸರಕಾರಿ ನೌಕರ ಅಧಿಕೃತವಾದ ಯಾವುದೇ ದಾಖಲೆ ಅಥವಾ ಮಾಹಿತಿಯನ್ನು ಮಾಧ್ಯಮಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದು ಬಿ.ದಯಾನಂದ್ ತಿಳಿಸಿದ್ದಾರೆ.

ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಮಾನ್ಯತೆ ಪಡೆದ ಅಧಿಕಾರಿ ಮಾತ್ರವೇ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಅಧಿಕೃತ ಮಾಹಿತಿ ಹಂಚಿಕೊಳ್ಳಲು ಅವಕಾಶವಿದೆ. ಯಾವುದೇ ಲೋಪ ಕಂಡುಬಂದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಲ್ಲಾ ವಿಭಾಗಗಳ ಡಿಸಿಪಿಗಳಿಗೆ ಬಿ.ದಯಾನಂದ್ ಅವರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News