ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಬಳಿ ಹೋಗಿ ಮನವಿ ಮಾಡಿದ್ರೂ ನ್ಯಾಯ ಸಿಗಲಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಅವರ ಬಳಿ ಮೂರು ಬಾರಿ ಹೋಗಿ ಮನವಿ ಮಾಡಿದೆವು, ಆದರೂ ನ್ಯಾಯ ಸಿಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ, ನಿರ್ಮಲಾ ಸೀತಾರಾಮನ್ ಅವರನ್ನು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಒದಗಿಸಿ ಎಂದು ಮೂರು ಭಾರಿ ಭೇಟಿಯಾಗಿ ಮನವಿ ಮಾಡಿದ್ದರೂ, ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಘೋಷಿಸಿದ್ದರೂ ಒಂದು ರೂ. ಬರಲಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲಿಲ್ಲ. ನೀವು ಬಿಜೆಪಿಯವರು ಅದರ ಬಗ್ಗೆ ಒಂದೂ ಮಾತೂ ಆಡಲಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವಾಗ ಧ್ವನಿ ಎತ್ತಲಿಲ್ಲ. ಕೇಂದ್ರ ಸರಕಾರದಲ್ಲಿ ನ್ಯಾಯಯುತವಾಗಿ ಬರಬೇಕಾದ್ದನ್ನು ಕೇಳಲೂ ಬಿಜೆಪಿಯವರಿಗೆ ಆಗಲಿಲ್ಲ. ರಾಜ್ಯಕ್ಕೆ ಇದರಿಂದ ಸಾಕಷ್ಟು ನಷ್ಟವಾಗಿದೆ. ವಿರೋಧ ಪಕ್ಷ ಇರುವುದು ಭಾಷಣ ಮಾಡಲು ಮಾತ್ರವೇ? ವಿರೋಧ ಪಕ್ಷದ ನಾಯಕ ಅಶೋಕ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಲಾವಿದರಿಗೆ ಅನುದಾನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ನಾವು ಈ ಬಾರಿ ಕಲಾವಿದರ ಮಾಶಾಸನ ಹೆಚ್ಚಳ ಮಾಡಿರುವುದು ಮಾತ್ರವಲ್ಲದೆ ಅನುದಾನ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಲಾಭ ಪೂರ್ತಿ ಕೇಂದ್ರ ಸರಕಾರವೇ ಪಡೆಯುತ್ತದೆ :
ಭಾರತ ರೈಲ್ವೆ ಕೇಂದ್ರ ಸರಕಾರದ ಸುಪರ್ದಿಗೆ ಬರುತ್ತದೆ. ಆದರೂ ರೈಲ್ವೆ ಯೋಜನೆಗೆ ರಾಜ್ಯ ಸರಕಾರ ಉಚಿತ ಸ್ಥಳವನ್ನು ಒದಗಿಸುತ್ತದೆ. ಶೇ.50 ವೆಚ್ಚವನ್ನು ರಾಜ್ಯ ಸರಕಾರ ವಹಿಸಿಕೊಳ್ಳುತ್ತದೆ. ಲಾಭ ಪೂರ್ತಿ ಕೇಂದ್ರ ಸರಕಾರವೇ ಪಡೆಯುತ್ತದೆ. ಉತ್ತರ ಪ್ರದೇಶದಲ್ಲಿ ಸ್ಥಳವನ್ನು ರೈಲ್ವೆಗೆ ಕೊಡುತ್ತಾರೆಯೇ? ಬಿಜೆಪಿಯವರು ರೈಲು ಬಿಡಬಾರದು ಎಂದು ವ್ಯಂಗ್ಯವಾಡಿದರು.
ಮನಮೋಹನ್ ಸಿಂಗ್ ಅವರು ಇದ್ದಾಗ ಶೇ.50 ವೆಚ್ಚ ಭರಿಸುತ್ತಿರಲಿಲ್ಲ. ಈಗ ಆ ವೆಚ್ಚ ವಹಿಸಿಕೊಳ್ಳದಿದ್ದರೆ ಯೋಜನೆಯನ್ನೇ ಮಂಜೂರು ಮಾಡುವುದಿಲ್ಲ ಎಂದು ತಿಳಿಸಿದರು.
ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆ ಬಗ್ಗೆ ಸಿಎಂ ಸ್ಪಷ್ಟನೆ :
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಸಂವಿಧಾನದ 46ನೇ ಪರಿಚ್ಚೇಧವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ವಿಶೇಷವಾಗಿ ಶೈಕ್ಷಣಿಕ , ಆರ್ಥಿಕ ಕಾರ್ಯಕ್ರಮಗಳನ್ನು ನೀಡಬೇಕು ಎಂದು ತಿಳಿಸಿದೆ. ಆಂಧ್ರ ಪ್ರದೇಶ ಮೊಟ್ಟ ಮೊದಲ ಬಾರಿಗೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾಯ್ದೆ ಜಾರಿಗೆ ತಂದಿದ್ದು, ನಂತರ ಅದನ್ನು ಕರ್ನಾಟಕ 2013ರಲ್ಲಿ ಜಾರಿಗೆ ತಂದಿತು. ಈಗ ತೆಲಂಗಾಣದಲ್ಲಿ ಕೂಡ ಜಾರಿಗೆ ಬಂದಿದ್ದು, ಇಡೀ ದೇಶದಲ್ಲಿ ಬೇರೆಲ್ಲೂ ಈ ಕಾಯ್ದೆ ಇಲ್ಲ. ಕಾಯ್ದೆ ಬಂದ ನಂತರ ರಾಜ್ಯದಲ್ಲಿ 261274 ಕೋಟಿ ವೆಚ್ಚ ಮಾಡಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಟ್ಟು 5 ವರ್ಷಗಳಲ್ಲಿ ನೀಡಿದ್ದ 35464 ಕೋಟಿ, ಅನುದಾನದಲ್ಲಿ 29452 ಕೋಟಿ ವೆಚ್ಚ ಮಾಡಿದ್ದಾರೆ ಎಂದರು.
ನಾವು ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳಲ್ಲಿ 1,80,000 ಕೋಟಿ ವೆಚ್ಚ ಮಾಡಿದ್ದೇವೆ. ದಲಿತರ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಲ್ಲ ಎಂದು ಸ್ಪಷ್ಟ ಪಡಿಸಿದರು.