ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ, ಮೇಲ್ವಿಚಾರಣೆಗೆ ಸಮಿತಿ : ಸಚಿವ ಮಧು ಬಂಗಾರಪ್ಪ
ಬೆಂಗಳೂರು : ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಮತ್ತು ಮೇಲ್ವಿಚಾರಣೆಗಾಗಿ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯ ಸಮಿತಿ ರಚಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಹಮ್ಮಿಕೊಳ್ಳಲಾದ ಸಮಗ್ರ ಶಿಕ್ಷಣ ಕರ್ನಾಟಕ ಸ್ವಾತಾಲಿಮ್ ಫೌಂಡೇಷನ್ ಸಹಯೋಗದಲ್ಲಿ ಗೆಳತಿಯರೊಂದಿಗೆ ಹಾರೋಣ ಕಾರ್ಯಕ್ರಮದಡಿ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕರ ಅಧ್ಯಕ್ಷತೆಯ ಸಮಿತಿ ರಚನೆಗೆ ನಿರ್ಧಾರವಾಗಿದ್ದು ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ನಂತರ ಜನವರಿಯಿಂದ ಕಾರ್ಯಾರಂಭ ಹಾಗೂ ಸಮಿತಿಗಳು ಅನುಷ್ಠಾನಕ್ಕೆ ಬರುತ್ತವೆ. ಈ ಸಮಿತಿಗಳು 2 ಅಥವಾ 3 ತಿಂಗಳಿಗೊಮ್ಮೆ ಸಭೆ ಸೇರುವ ಬಗ್ಗೆ ಚಿಂತನೆ ನಡೆದಿದೆ. ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಭೌತಿಕ ಹಾಗೂ ಆರ್ಥಿಕಯ ಪ್ರಗತಿಯ ಕುರಿತು ಕಾಲಕಾಲಕ್ಕೆ ಸಮಿತಿಗಳು ಪರಿಶೀಲಿಸಲಿವೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿನ ವಿದ್ಯಾರ್ಥಿನಿಯರಿಗೆ ‘ಬಾಲಕಿಯರಿಗಾಗಿ ಅಗತ್ಯ ಕೌಶಲ್ಯಗಳು’ ಮತ್ತು ‘ಇಂಗ್ಲೀಷ್ ಬ್ರಿಡ್ಜ್ ಕೋರ್ಸ್ ಕೈಪಿಡಿ’ಯನ್ನು ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.
ಕಸ್ತೂರಬಾ ಗಾಂಧಿ ಬಾಲಿಕಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳ 135 ವಾರ್ಡನ್‍ಗಳಿಗೆ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಂನಲ್ಲಿ 4500ಕ್ಕೂ ಹೆಚ್ಚು ಪೋಷಕರು ಅವರ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಪರಸ್ಪರ ಧ್ವನಿ ಪ್ರತಿಕ್ರಿಯಾ ವ್ಯವಸ್ಥೆ ಕರೆಗಳ ಮೂಲಕ ಸಂಪರ್ಕಿಸಲಾಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಹೊಸದುರ್ಗ ಶಾಸಕ ಗೋವಿಂದಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ, ಹಿರಿಯ ಶಾಸಕ ಅಲ್ಲಮಪ್ರಭು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.