ಬಾಣಂತಿಯರ ಸರಣಿ ಸಾವು ಪ್ರಕರಣ | ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿ : ದಿನೇಶ್ ಗುಂಡೂರಾವ್
ಬೆಂಗಳೂರು : ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿರಬಹುದಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬುಧವಾರ ಇಲ್ಲಿನ ವಿಕಾಸಸೌಧದಲ್ಲಿ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಐವಿ ದ್ರಾವಣದ 22 ಬ್ಯಾಚ್ ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕೇಸ್ ದಾಖಲಿಸಿ ಎಂದು ಸೂಚಿಸಿದರು.
ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ 22 ಬ್ಯಾಚ್‍ಗಳ ವರದಿಯಲ್ಲಿ 13 ಬ್ಯಾಚ್‍ಗಳ ವರದಿ ಪ್ರಶ್ನಿಸಿ ಕಂಪನಿಯವರು ಸೆಂಟ್ರಲ್ ಡ್ರಗ್ ಲ್ಯಾಬರೋಟಿರಿ ಮೆಟ್ಟಿಲೇರಿದ್ದಾರೆ. ಅದರಲ್ಲಿ 4 ಬ್ಯಾಚ್‍ಗಳು ಗುಣಮಟ್ಟ ಹೊಂದಿವೆ ಎಂದು ಸೆಂಟ್ರಲ್ ಡ್ರಗ್ ಲ್ಯಾಬ್ ವರದಿ ನೀಡಿದೆ. ಅಲ್ಲದೆ, 13 ಬ್ಯಾಚ್‍ಗಳ ಬಗ್ಗೆ ಸೆಂಟ್ರಲ್ ಡ್ರಗ್ ಲ್ಯಾಬ್‍ನಿಂದ ವರದಿ ಬರಬೇಕಿದೆ. ಉಳಿದ 9 ಬ್ಯಾಚ್‍ಗಳ ವಿಚಾರವಾಗಿ ಕಂಪೆನಿಯವರನ್ನು ವಿಚಾರಣೆಗೆ ಒಳಪಡಿಸಬಹುದಲ್ಲ ಎಂದು ಸೂಚನೆ ನೀಡಿದರು.
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಐವಿ ದ್ರಾವಣ ಒಂದು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿಯ ವರದಿಗಳಿರುವಾಗ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳು ಏನು ಕ್ರಮ ವಹಿಸಿದ್ದಾರೆ? ಟೆಸ್ಟಿಂಗ್ ವರದಿಗಳನ್ನು ಶೀಘ್ರದಲ್ಲಿ ಕೊಡಬೇಕು. ಟೆಸ್ಟಿಂಗ್ ವರದಿಗಳನ್ನು ನೀಡಲು ವಿಳಂಬ ನೀತಿ ಏಕೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದ ಡ್ರಗ್ ಕಂಟ್ರೋಲ್ ನೀಡಿದ ವರದಿಯಲ್ಲಿ 22 ಬ್ಯಾಚ್‍ಗಳು ಸ್ಟಾಂಡರ್ಡ್ ಗುಣಮಟ್ಟ ಹೊಂದಿಲ್ಲ ಎಂದು ವರದಿಯಿದೆ. ಇದರಲ್ಲಿ ಸೆಂಟ್ರಲ್ ಲ್ಯಾಬ್ ನವರು 4 ಬ್ಯಾಚ್‍ಗಳಿಗೆ ಮಾತ್ರ ಗುಣಮಟ್ಟ ಹೊಂದಿದೆ ಎಂದು ವರದಿ ನೀಡಿದ್ದಾರೆ. ಆದರೆ ಓಂಃಐ ಲ್ಯಾಬ್‍ನವರು 192 ಬ್ಯಾಚ್‍ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿದೆ ಎಂದು ವರದಿ ನೀಡಿದ್ದಾರೆ. ಇದು ಹೇಗೆ ಸಾಧ್ಯ. ಈ ಬಗ್ಗೆ ಪರಿಶೀಲನೆ ನಡೆಸಿ, ಲ್ಯಾಬ್ ನವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಔಷಧಿ ಸರಬರಾಜು ನಿಗಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.