ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ | ತನಿಖೆಗೆ ಎಸ್ಐಟಿ ರಚಿಸಿದ ಹೈಕೋರ್ಟ್

Update: 2024-12-04 15:05 GMT

ಬೆಂಗಳೂರು : ಭೋವಿ ಅಭಿವೃದ್ಧಿ ನಿಗಮ ಹಗರಣ ತನಿಖೆಯ ನೆಪದಲ್ಲಿ ಡಿವೈಎಸ್ಪಿ ಕನಕಲಕ್ಷ್ಮೀ ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್‌.ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಗೆ ಹೈಕೋರ್ಟ್ ಎಸ್‌ಐಟಿ ರಚಿಸಿ ಆದೇಶಿದೆ.

ಸಿಬಿಐ ತನಿಖೆ ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ ಮಧ್ಯಂತರ ಅರ್ಜಿ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ರದ್ದು ಕೋರಿ ಆರೋಪಿ ಕನಕಲಕ್ಷ್ಮಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿ, ಎಸ್ಐಟಿ ರಚಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಷರತ್ತು ವಿಧಿಸಿದೆ.

ತನಿಖಾ ತಂಡದಲ್ಲಿ ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ, ಕರ್ನಾಟಕ ಹೋಮ್ ಗಾರ್ಡ್‌ನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್ ಮಚೀಂದ್ರ ಹಾಕೆ ಹಾಗೂ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸೇರಿದಂತೆ ಮೂರು ಅಧಿಕಾರಿಗಳ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದೆ.

ಕನಕಲಕ್ಷ್ಮಿ ಅವರು ಭೋವಿ ಹಗರಣದ ಪ್ರಕರಣದ ಆರೋಪಿಯೊಬ್ಬರಿಂದ 25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಬೇರಾವುದೇ ದಾಖಲೆಯಿಲ್ಲ. ಬಿಎನ್‌ಎಸ್ ಸೆಕ್ಷನ್ 108 (ಐಪಿಸಿ ಸೆಕ್ಷನ್ 306) ಅಡಿ ಎಸ್‌ಐಟಿ ತನಿಖೆ ಮಾಡುವಾಗ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಗಮನಕ್ಕೆ ಬಂದರೆ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆಯ ಸೆಕ್ಷನ್ 17ಎ ಅಡಿ ಕಾನೂನಿನ ಅನ್ವಯ ತನಿಖೆ ನಡೆಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ತನಿಖೆಯನ್ನು ಈ ಕೂಡಲೇ ಎಸ್‌ಐಟಿ ಆರಂಭಿಸಬೇಕು. ಪ್ರಕರಣ ಕುರಿತಾದ ಎಲ್ಲ ದಾಖಲೆಗಳನ್ನು ಸಂಬಂಧಿತ ಅಧಿಕಾರಿಗಳು ಎಸ್‌ಐಟಿಗೆ ಒದಗಿಸಬೇಕು. ಅಗತ್ಯ ಇದ್ದರೆ ಇತರೆ ಪೊಲೀಸ್ ಅಧಿಕಾರಿಗಳನ್ನು ಎಸ್‌ಐಟಿಯು ನೆರವಿಗೆ ಪಡೆಯಬಹುದು. ತನಿಖೆ ಆರಂಭವಾದಗಿನಿಂದ ಮೂರು ತಿಂಗಳಲ್ಲಿ ತನಿಖೆ ಮುಗಿಯಬೇಕು. ತನಿಖಾ ವರದಿಯನ್ನು ಮೂರು ತಿಂಗಳು ಅಥವಾ ಅದರ ಒಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಎಸ್‌ಐಟಿಗೆ ಅಗತ್ಯವಾದ ಕಚೇರಿ ಮತ್ತಿತರ ಸೌಲಭ್ಯವನ್ನು ರಾಜ್ಯ ಸರಕಾರ ಒದಗಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಾಗೂ ಈ ವಿಚಾರವಾಗಿ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದು ಕೋರಿ ಆರೋಪಿ ಕನಕಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News