ಕೇಂದ್ರ ಬಜೆಟ್​ಗೆ ರಾಜ್ಯ ಕಾಂಗ್ರೆಸ್​ ನಾಯಕರ ವಿರೋಧ | ದಕ್ಷಿಣ ರಾಜ್ಯಗಳ ತೆರಿಗೆ ಸಂಪತ್ತನ್ನು ಉತ್ತರಕ್ಕೆ ಸುರಿಯಲಾಗಿದೆ : ಜಿ.ಪರಮೇಶ್ವರ್‌ ಆಕ್ರೋಶ

Update: 2025-02-01 16:48 IST
ಕೇಂದ್ರ ಬಜೆಟ್​ಗೆ ರಾಜ್ಯ ಕಾಂಗ್ರೆಸ್​ ನಾಯಕರ ವಿರೋಧ | ದಕ್ಷಿಣ ರಾಜ್ಯಗಳ ತೆರಿಗೆ ಸಂಪತ್ತನ್ನು ಉತ್ತರಕ್ಕೆ ಸುರಿಯಲಾಗಿದೆ : ಜಿ.ಪರಮೇಶ್ವರ್‌ ಆಕ್ರೋಶ
ನಿರ್ಮಲಾ ಸೀತಾರಾಮನ್/ಜಿ.ಪರಮೇಶ್ವರ್‌ | PC : PTI
  • whatsapp icon

ಬೆಂಗಳೂರು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌​ ಅವರು 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಆದರೆ, ಈ ಬಜೆಟ್​​ಗೆ ರಾಜ್ಯ ಕಾಂಗ್ರೆಸ್ ​ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಬಿಹಾರ ಚುನಾವಣೆಯ ಪ್ರಣಾಳಿಕೆ, ರೈತ ವಿರೋಧಿ ಬಜೆಟ್​ ಎಂದು ಟೀಕಿಸಿದ್ದಾರೆ.

ದಕ್ಷಿಣ ರಾಜ್ಯಗಳ ತೆರಿಗೆಯ ಸಂಪತ್ತನ್ನು ಉತ್ತರ ಭಾರತಕ್ಕೆ ಸುರಿಯಲಾಗಿದೆ : ಜಿ.ಪರಮೇಶ್ವರ್‌

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2025-26ನೇ ಸಾಲಿನ ಆಯ-ವ್ಯಯ, ದೇಶದಲ್ಲೇ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕವನ್ನು ಅಭಿವೃದ್ಧಿಯಿಂದ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ದೇಶದ ದಕ್ಷಿಣ ಭಾಗದ ರಾಜ್ಯಗಳ ಜನರ ತೆರಿಗೆಯ ಸಂಪತ್ತನ್ನು ಉತ್ತರ ಭಾರತ ರಾಜ್ಯಗಳ ಅಭಿವೃದ್ಧಿಗೆ ಸುರಿಯಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ. ನೀರಾವರಿ ಯೋಜನೆಗಳನ್ನು, ರೈತರ ಆದಾಯ ಹೆಚ್ಚಿಸುವಂಥ ಬಲಿಷ್ಟವಾದ ಯೋಜನೆಗಳನ್ನು ರೂಪಿಸಿಲ್ಲ. ಯುವಕರ ನಿರುದ್ಯೋಗ ಸಮಸ್ಯೆಗೆ ಪರಿಹಾರಗಳಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಅಸಮಾಧಾನ ಹೊರಹಾಕಿದ್ದಾರೆ.

ಕೇಂದ್ರ ಸರಕಾರದಲ್ಲಿ ಕರ್ನಾಟಕದ ಮೂವರು ಸಚಿವರಿದ್ದರೂ, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿನ ಮಹಾನಗರಗಳ ಸುರಕ್ಷತೆಗೆ ಮತ್ತು ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ನೀಡುವ ನಿರೀಕ್ಷೆಯು ಹುಸಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕರ್ನಾಟಕದ ಜನತೆಗೆ ಬಜೆಟ್‌ನಲ್ಲಿ ಮತ್ತೊಮ್ಮೆ ಮೋಸ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ರೈತರ, ಮಹಿಳೆಯರ, ದಲಿತರ ವಿರೋಧಿ ಬಜೆಟ್ : ತಂಗಡಗಿ

2025-26ನೇ ಸಾಲಿನ ಬಜೆಟ್ನಲ್ಲಿ ಗ್ರಾಮೀಣ ಭಾಗದಲ್ಲಿ ಯಾರ ಬಳಿಯೂ ಹಣವಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರು ಕಣ್ಣೀರು ಹಾಕುವಂತಾಗಿದೆ. ವಿಪರ್ಯಾಸವೆಂದರೆ ದೇಶದಲ್ಲಿ ಅಂದಾಜು ಶೇ.45ರಿಂದ 50ರಷ್ಟು‌ ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ನಿಜಕ್ಕೂ ನಮ್ಮ ದುರ್ದೈವ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹೇಳಿದ್ದಾರೆ.

ಕೇಂದ್ರ ಸರಕಾರ ನಮ್ಮ‌ರಾಜ್ಯಗಳಿಗೆ ಅನ್ಯಾಯ ಮಾಡಿದೆ.‌ ಬಜೆಟ್ ನಿಂದ ಸಣ್ಣ‌ ಕೈಗಾರಿಕೆಗಳಿಗೆ ಯಾವುದೇ ಅನುಕೂಲವಾಗಿಲ್ಲ. ರೈಲ್ವೆ,‌ ಶಿಕ್ಷಣ, ಮೂಲಸೌಲಭ್ಯ ಯೋಜನೆಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ರೈತರ, ಮಹಿಳೆಯರ, ದಲಿತರ ವಿರೋಧಿ ಬಜೆಟ್ ಆಗಿದೆ‌. ಬಿಹಾರ ರಾಜ್ಯಕ್ಕೆ ವಿಶೇಷವಾದ ಯೋಜನೆಗಳನ್ನು ಘೋಷಿಸುವ ಮೂಲಕ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವರು ಬಿಹಾರ ರಾಜ್ಯದ ಜಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಬಿಜೆಪಿ- ಎನ್.ಡಿ.ಎ.ಯೇತರ ರಾಜ್ಯಗಳಿಗೆ ಘೋರ ಅನ್ಯಾಯ : ಈಶ್ವರ ಖಂಡ್ರೆ ಕಿಡಿ

ಕೇಂದ್ರ ಬಜೆಟ್ ರೈತರ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ. ರೈತರು ಬೆಳೆದ ಬೆಳೆಗೆ ನಿಶ್ಚಿತ ಬೆಲೆ ಬರಬೇಕು. ಇಂದು ಅನ್ನದಾತರ ಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಎಲ್ಲ ವಸ್ತುಗಳಿಗೂ ಎಂ.ಎಸ್.ಪಿ. ಇರುವಾಗ ರೈತರ ಕಷ್ಟಾರ್ಜಿತಕ್ಕೆ ನಿರ್ದಿಷ್ಟ ಬೆಲೆ ನೀಡುವ ಎಂ.ಎಸ್.ಪಿ. ಕಾಯಿದೆ ಬಗ್ಗೆ ಪ್ರಕಟಿಸದ ಬಜೆಟ್ ಇದಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ರೈತರು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಸಾಲದ ಹೊರೆ ತಾಳದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಬಗ್ಗೆ ಈ ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಬಜೆಟ್ ನಲ್ಲಿ ಬಿಜೆಪಿ ಮತ್ತು ಎನ್.ಡಿ.ಎ.ಯೇತರ ರಾಜ್ಯಗಳಿಗೆ ಘೋರ ಅನ್ಯಾಯ ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಇಂತಹ ತಾರತಮ್ಯ  ಸಮರ್ಥನೀಯವಲ್ಲ. ಇಂತಹ ಒಂದು ಕೆಟ್ಟ ಸಂಪ್ರದಾಯಕ್ಕೆ ಬಜೆಟ್ ನಾಂದಿ ಹಾಡಿದೆ. ಕರ್ನಾಟಕದ ನಿರೀಕ್ಷೆಗಳೂ ಹುಸಿಯಾಗಿವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬಿಹಾರ ಚುನಾವಣೆಯ ಪ್ರಣಾಳಿಕೆಯಂತಿದೆ : ಲಕ್ಷ್ಮೀ ಹೆಬ್ಬಾಳ್ಕರ್‌

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದ್ದಾರೆ ಎನಿಸುತ್ತಿದೆ. ಬಜೆಟ್‌ನಿಂದ ರಾಜ್ಯಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಬಿಹಾರ ಜನರ ಒಲೈಕೆಗಾಗಿ ಪ್ರಮುಖ ಐದಾರು ಯೋಜನೆಗಳನ್ನು ಘೋಷಿಸಿದರೆ, ಕರ್ನಾಟಕಕ್ಕೆ ಒಂದು ನಯಾ ಪೈಸೆ ನೀಡಿಲ್ಲ. ಬೆಂಗಳೂರಿಗೆ ವಿಶೇಷ ಅನುದಾನ ನಿರೀಕ್ಷಿಸಲಾಗಿತ್ತು. ಈ ಬಜೆಟ್‌ನಿಂದ ಸಂಪೂರ್ಣ ನಿರಾಸೆ ಉಂಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಕಿಡಿಕಾರಿದ್ದಾರೆ.

ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ನಮ್ಮ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಲಾಭವಿಲ್ಲ. ಇದೊಂದು ಸಂಪೂರ್ಣ ರೈತ ವಿರೋಧಿ, ಕರ್ನಾಟಕ ವಿರೋಧಿ ಬಜೆಟ್ ಎಂದು ಸಚಿವರು ತಿಳಿಸಿದರು.

ಕೇಂದ್ರ ಸರಕಾರದಿಂದ ಮುಂದುವರೆದ ಮಲತಾಯಿ ಧೋರಣೆ : ಭೋಸರಾಜು

ಬಹಳಷ್ಟು ನಿರೀಕ್ಷೆಗಳಿಗೆ ತಣ್ಣೀರು ಎರಚುವ ಮೂಲಕ ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ಮೇಲೆ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ. ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಜಗಜ್ಜಾಹೀರಾಗಿದೆ. ನಮ್ಮ ಒಕ್ಕೂಟ ವ್ಯವಸ್ಥೆಯು ಬಲಿಷ್ಠವಾಗಿರಬೇಕೆಂದರೆ ಕೇಂದ್ರ ಸರ್ಕಾರವು ತಾರತಮ್ಯರಹಿತ, ನ್ಯಾಯಸಮ್ಮತ, ಪಾರದರ್ಶಕ ನೀತಿಯನ್ನು ತನ್ನದಾಗಿಸಿಕೊಳ್ಳಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News