ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ರಿಂದ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-03-31 17:59 GMT

ಬೆಂಗಳೂರು: ರಾಜ್ಯದಲ್ಲಿ ಮೋದಿ ಪರವಾದ ಯಾವುದೇ ಅಲೆಯೂ ಇಲ್ಲ. ನಮ್ಮ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆಲ್ಲುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಅದು ಖಂಡಿತ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ 15ರಿಂದ 20 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂಬ ವಿಶ್ವಾಸವಿದೆ ಎಂದು ನುಡಿದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಅನುಷ್ಟಾನಗೊಳಿಸಿರುವ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಈ ಯೋಜನೆಗಳು ಚುನಾವಣೆಯಲ್ಲಿ ನಮ್ಮ ಗೆಲುವಿಗೆ ನೆರವಾಗಲಿದ್ದು, ವಿಶೇಷವಾಗಿ ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ನಾನು ಜನರ ನಾಡಿನ ಮಿಡಿತ ಅರಿತಿದ್ದು, ನಮ್ಮ ಸಮೀಕ್ಷೆಯನ್ನು ಆಧರಿಸಿ ಕನಿಷ್ಟ 15 ಸ್ಥಾನ ಗಳಿಸಲಿದ್ದೇವೆ ಎಂದು ಅವರು ಹೇಳಿದರು.

ಸಚಿವರಿಗೆ ಹೊಣೆ: ಜಿಲ್ಲಾ ಉಸ್ತುವಾರಿ ಸಚಿವರಿಗೂ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಿದ್ದೇವೆ. ಎಲ್ಲ ಶಾಸಕರೊಂದಿಗೆ ಸಮನ್ವಯತೆ ಕಾಯ್ದುಕೊಂಡು ಒಗೂಪಕ್ಷದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಆದರೆ, ಬಿಜೆಪಿಯಲ್ಲಿ ಹೆಚ್ಚು ಭಿನ್ನಮತವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೋದಿ ಅಲೆ ಎಂಬುದು ಬಿಜೆಪಿಯವರ ಸೃಷ್ಟಿ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಗೆಲ್ಲುತ್ತದೆ ಎಂಬುದು ಶುದ್ಧ ಸುಳ್ಳು. ಸುಳ್ಳು ಹೇಳಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಭ್ರಮೆಗಳನ್ನು ಸೃಷ್ಟಿಸಿ ಗೆಲ್ಲಲು ಆಗುವುದಿಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ತನ್ನ ಸಾಧನೆಗಳು, ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳಲಿದ್ದು, ಅದಕ್ಕೆ ಜನತೆ ಮನ್ನಣೆ ನೀಡುವ ಭರವಸೆ ಇದೆ ಎಂದು ಅವರು ತಿಳಿಸಿದರು.

ಬಿಜೆಪಿ ಕೇಂದ್ರದಲ್ಲಿ 10 ವರ್ಷಗಳಿಂದ ಅಧಿಕಾರದಲ್ಲಿದೆ. ರಾಮಮಂದಿರ ಕಟ್ಟಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ಅದರಿಂದ ಜನರ ಹೊಟ್ಟೆ ತುಂಬುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆಯೂ ಏರಿಕೆಯಾಗಿದೆ. ಚುನಾವಣೆಯಲ್ಲಿ ಇದು ಬಿಜೆಪಿ ಪೆಟ್ಟು ನೀಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ಆಗಿರುವ ತೆರಿಗೆ ಅನ್ಯಾಯ, ಅನುದಾನ ಕಡಿತ ಎಲ್ಲವೂ ಜನರಿಗೆ ಮನವರಿಕೆಯಾಗಿವೆ. ಇವೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ನೆರವಾಗಲಿವೆ. ಕೇಂದ್ರದ ಬಿಜೆಪಿ ಸರಕಾರದ ಅನ್ಯಾಯದ ವಿರುದ್ಧ ರಾಜ್ಯದ ಜನ ಆಕ್ರೋಶಗೊಂಡಿದ್ದಾರೆ. ಈ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸುವುದು ನಿಶ್ಚಿತ ಎಂದು ಸಿದ್ದರಾಮಯ್ಯ ವಿವರಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ತಕ್ಷಣ ಜೆಡಿಎಸ್ ಮತಗಳು ಬಿಜೆಪಿಗೆ ಹೋಗುತ್ತವೆಂದು ನನಗೆ ಅನಿಸಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಮೈಸೂರು, ಮಂಡ್ಯ ಮತ್ತಿತರ ಕಡೆ ಜೆಡಿಎಸ್ ಮತಗಳು ನಮಗೆ ಬರಲಿಲ್ಲ. ನಮ್ಮ ಮತಗಳು ಜೆಡಿಎಸ್‍ಗೆ ಹೋಗಲಿಲ್ಲ. ಅದೇ ರೀತಿ ಬಿಜೆಪಿ-ಜೆಡಿಎಸ್ ಮೈತ್ರಿಗೂ ಇದೇ ಮಾನದಂಡ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ನಡುವೆ ಪೈಪೋಟಿ ಇದೆ. ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಉಡುಪಿ ಚಿಕ್ಕಮಗಳೂರು, ಬೆಂಗಳೂರು ನಗರ ವ್ಯಾಪ್ತಿಯ ಮೂರು ಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಪರ ಜನರ ಒಲವು ಇದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಒಳ್ಳೆಯ ವೈದ್ಯರು. ಆದರೆ, ಅವರು ರಾಜಕಾರಣಿಯಲ್ಲ. ಹೀಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News