ಕೋವಿಡ್ ಹಗರಣ | ಎಸ್‌ಐಟಿ ರಚನೆಗೆ ಸಚಿವ ಸಂಪುಟ ನಿರ್ಧಾರ
ಬೆಂಗಳೂರು : ʼರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಕೊರೋನ ಸಾಂಕ್ರಮಿಕದ ಸಂದರ್ಭದಲ್ಲಿ ಪಿಪಿಇ ಕಿಟ್, ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‍ಐಟಿ)ರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆʼ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾ.ಜಾನ್ ಮೈಕಲ್ ಕುನ್ಹಾ ನೇತೃತ್ವದ ಆಯೋಗವು ತನಿಖೆ ನಡೆಸಿ 2 ಮಧ್ಯಂತರ ವರದಿಗಳನ್ನು ನೀಡಿದೆ. ಅದರಲ್ಲಿ, ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಎಳೆ ಎಳೆಯಾಗಿ ಬಿಡಿಸಿಟ್ಟಿದೆ ಎಂದು ಹೇಳಿದರು.
ಈ ಬ್ರಹ್ಮಾಂಡ ಭ್ರಷ್ಟಾಚಾರ, ಜನರ ಜೀವಗಳ ಜೊತೆ ಚೆಲ್ಲಾಟವಾಡಿದ ಅಮಾನವೀಯ ಘಟನೆಗಳ ಬಗ್ಗೆ ಸತ್ಯ ಸಂಶೋಧನೆ ನಡೆಸಿರುವ ಆಯೋಗದ ವರದಿಯ ಆಧಾರದ ಮೇಲೆ ಮುಂದುವರೆದ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ತನಿಖಾ ತಂಡವೊಂದನ್ನು ನೇಮಕ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ತನಿಖಾ ವರದಿಯ ನಂತರ ಕೋವಿಡ್ ಸಂದರ್ಭದಲ್ಲಿ ಸರಕಾರದ ಅಧಿಕಾರಿಗಳು, ಅಧಿಕಾರಸ್ಥ ರಾಜಕಾರಣಿಗಳ ಅಪವಿತ್ರ ಮೈತ್ರಿಯ ಫಲವಾಗಿ ನಡೆದ ಭ್ರಷ್ಟಾಚಾರ, ಹಗರಣಗಳ ಕುರಿತು ಸತ್ಯಾಂಶಗಳು ಲಭ್ಯವಾಗಿದ್ದವು ಎಂದು ಅವರು ವಿವರಿಸಿದರು.
ಸಾರ್ವಜನಿಕರ ಲೆಕ್ಕಪತ್ರ ಸಮಿತಿಯಂತಹ ಮಹತ್ವದ ಸಮಿತಿಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟು ಮಾಡಿದ ಮಹತ್ವದ ಘಟನೆಗಳು ನಡೆದು ಹೋದವು. ಶಾಸನಬದ್ಧ ಸಮಿತಿಗಳ ಕಾರ್ಯನಿರ್ವಹಣೆಯನ್ನು ಅಸಾಧ್ಯವೆನ್ನುವ ರೀತಿಯಲ್ಲಿ ವಾತಾವರಣ ನಿರ್ಮಾಣ ಮಾಡಲಾಯಿತು ಮತ್ತು ಕಡಿವಾಣ ಹಾಕಲಾಗಿತ್ತು. ಸಮಿತಿಗಳ ಕಾರ್ಯನಿರ್ವಹಣೆಯನ್ನು ತಡೆದು ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು.
ಕೊರೋನ ಸಂದರ್ಭದಲ್ಲಿ 330 ರಿಂದ 400 ರೂ.ಗಳಿಗೆ ಲಭ್ಯವಿದ್ದ ಪಿಪಿಇ ಕಿಟ್ ಗಳನ್ನು 2117 ರೂ.ಗೆ ಖರೀದಿಸಲಾಯಿತು. 3 ಲಕ್ಷ ಕಿಟ್ ಖರಿದಿಸಲಾಯಿತು. ಆಮದು ಸಾಗಣೆ ವೆಚ್ಚ ನೀಡಿ ಅನುಮಾನಾಸ್ಪದ ವೆಚ್ಚ ಮಾಡಲಾಯಿತು. ಚೀನಾ ಕಂಪನಿಗಳಿಗೆ ಲಾಭ ಮಾಡಿಕೊಡಲಾಯಿತು. ಒಂದೇ ದಿನ ಎರಡು ದರಗಳಲ್ಲಿ 2117.53 ರೂ.ಹಾಗು 2104 ರೂ.ಗೆ ಖರೀದಿ ಮಾಡಲಾಯಿತು. ಅದೇ ದಿನ 2049 ರೂ.ಗಳಂತೆ ಇನ್ನೊಂದು ಕಂಪನಿಯಿಂದ ಖರೀದಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ನ್ಯಾ.ಕುನ್ಹಾ ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ಅಕ್ರಮದ ಉಲ್ಲೇಖ ಮಾಡಲಾಗಿದೆ. ನಿಯಮ ಬಾಹಿರವಾಗಿ ಖಾಸಗಿ ಲ್ಯಾಬ್‍ಗಳಿಗೆ 6.93 ಕೋಟಿ ರೂ. ಸಂದಾಯದ ಪ್ರಸ್ತಾಪ, ಖಾಸಗಿ ಲ್ಯಾಬ್‍ಗಳಿಗೆ ನಿಯಮ ಬಾಹಿರವಾಗಿ ಹಣ ಸಂದಾಯವಾದ ಆರೋಪ, ಐಸಿಎಂಆರ್ ಮಾನ್ಯತೆ ಇಲ್ಲದ ಲ್ಯಾಬ್‍ಗಳಿಗೆ ಹಣ ಸಂದಾಯ ಮಾಡಿದ ಉಲ್ಲೇಖ, ಕೇಂದ್ರ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಹಣ ಸಂದಾಯ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂದು ಅವರು ತಿಳಿಸಿದರು.
8 ಲ್ಯಾಬ್‍ಗಳಿಗೆ 4 ಕೋಟಿ 28 ಲಕ್ಷ ರೂ. ಸಂದಾಯ ಮಾಡಲಾಗಿದೆ ಅಂತ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಒಪ್ಪಂದ ಮಾಡಿಕೊಳ್ಳದೆ ಲ್ಯಾಬ್‍ಗಳಿಗೆ ಬೇಕಾಬಿಟ್ಟಿ ಹಣ ಸಂದಾಯ ಮಾಡಿರುವುದನ್ನು ಆಯೋಗ ಗಮನಿಸಿದೆ. ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಪ್ರಚಾರಕ್ಕಾಗಿ ಇಟ್ಟಿದ್ದ 7 ಕೋಟಿ 3 ಲಕ್ಷ ರೂ.ಹಣದಲ್ಲೂ ಸಾಕಷ್ಟು ಅಕ್ರಮ ನಡೆದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಚುಕ್ಕಿ ಟಾಕೀಸ್ ಎಂಬ ಸಂಸ್ಥೆಗೆ 8.85 ಲಕ್ಷರೂ. ನಿಯಮ ಬಾಹಿರವಾಗಿ ಪಾವತಿ ಮಾಡಲಾಗಿದೆ. ಕೆಲವು ಏಜೆನ್ಸಿಗಳಿಗೆ ಸುಮಾರು 5 ಕೋಟಿ ರೂ.ಗಳಷ್ಟು ಹಣ ಪಾವತಿಸಿರುವ ಬಗ್ಗೆ ಆರೋಗ್ಯ ಇಲಾಖೆ ದಾಖಲೆ ಒದಗಿಸಲಿಲ್ಲ ಎಂದು ಅವರು ಹೇಳಿದರು.
ಸಾವಿನ ಬಗ್ಗೆ ಸರಿಯಾಗಿ ಲೆಕ್ಕ ಕೊಡಲಿಲ್ಲ. ಸಾವಿನ ಲೆಕ್ಕ ಪರಿಶೋಧನೆ ನಡೆಸದೆ ನೈಜವಾದ ಸಾವಿನ ಸಂಖ್ಯೆಗಳನ್ನು ಸರಕಾರ ಬಚ್ಚಿಟ್ಟಿತ್ತು. ಸರಕಾರ ನ್ಯಾಯಯುತವಾದ ಯಾವುದೇ ಕ್ರಮ ಕೈಗೊಳ್ಳದೇ ಜನರಿಗೆ ಮೋಸ ಎಸಗಿ, ಅವ್ಯವಹಾರದಲ್ಲಿ ತೊಡಗಿತ್ತು ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು.
ಈ ಎಲ್ಲ ಅವ್ಯವಹಾರ ಕ್ರಮಗಳಲ್ಲಿ ಅಪರಾಧಿ ಅಂಶಗಳನ್ನು ತನಿಖೆ ಮಾಡಿ ಎಫ್.ಐ.ಆರ್, ದೋಷಾರೋಪ ಪಟ್ಟಿ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಸೂಕ್ತ ಶಿಕ್ಷೆಗೆ ಅಭಿಯೋಜನೆಗೆ ಒಳಪಡಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.