‘ಇಂಗ್ಲೆಂಡ್‍ನ ಪ್ರಮುಖ ಕಂಪನಿಗಳ ಜೊತೆ ಚರ್ಚೆ’

Update: 2024-11-30 23:40 IST
Photo of Program
  • whatsapp icon

ಲಂಡನ್ : ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಮತ್ತು ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲು ಟೆಸ್ಕೊ ಉದ್ದೇಶಿಸಿದ್ದು, ಇದರಿಂದ 16,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಇನ್ವೆಸ್ಟ್ ಕರ್ನಾಟಕದ ಅಂತರ್‌ರಾಷ್ಟ್ರೀಯ ರೋಡ್‌ಶೋದ ಭಾಗವಾಗಿ ಸಚಿವರು ಲಂಡನ್‍ನಲ್ಲಿ ಎರಡನೇ ದಿನ ರೋಲ್ಸ್ ರಾಯ್ಸ್, ಮೆಗೆಲ್ಲನ್ ಏರೋಸ್ಪೇಸ್, ಟೆಸ್ಕೊ ಮತ್ತು ಪಿಯರ್ಸನ್ ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ ನಂತರ ಈ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ತನ್ನ ವಹಿವಾಟು ವಿಸ್ತರಿಸಲು 1,500 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಟೆಸ್ಕೊ ಗ್ರೂಪ್, ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪಿಸಲಿದೆ. ಇದರಿಂದ 16,500 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ವೈಮಾಂತರಿಕ್ಷ-ರಕ್ಷಣೆ, ವಾಹನ ತಯಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಎಂ.ಬಿ.ಪಾಟೀಲ್, ಇಂಗ್ಲೆಂಡ್‍ನ ಉನ್ನತ ಜಾಗತಿಕ ಕಂಪನಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿನ ಸದೃಢ ಮೂಲಸೌಲಭ್ಯ, ಉದ್ಯಮ ಪೂರಕ ವಾತಾವರಣ ಮತ್ತು ‘ಕ್ವಿನ್ ಸಿಟಿ’ ಯೋಜನೆಗಳಂತಹ ದೂರದೃಷ್ಟಿಯ ಉಪಕ್ರಮಗಳನ್ನು ಪರಿಚಯಿಸಿದ್ದಾರೆ.

ರೋಲ್ಸ್ ರಾಯ್ಸ್ ಗ್ರೂಪ್ ಜೊತೆಗಿನ ಸಭೆಯಲ್ಲಿ ಎಂ.ಬಿ.ಪಾಟೀಲ್, ಏರೋಸ್ಪೇಸ್ ಮತ್ತು ರಕ್ಷಣೆ ವಲಯದಲ್ಲಿ ಕರ್ನಾಟಕದಲ್ಲಿ ಲಭ್ಯ ಇರುವ ಅವಕಾಶಗಳನ್ನು ಪರಿಚಯಿಸಿದರು. ಇದಕ್ಕೆ ಕಂಪೆನಿಯ ನಾಯಕತ್ವವು ಮೆಚ್ಚುಗೆ ಸೂಚಿಸಿದೆ. ಇಂಗ್ಲೆಂಡ್‍ನ ಪ್ರಮುಖ ಶೈಕ್ಷಣಿಕ ಕಂಪೆನಿಯಾಗಿರುವ ಪಿಯರ್ಸನ್ ಗ್ರೂಪ್, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಲಿಕೆಯ ಪರಿಹಾರಗಳನ್ನು ಮತ್ತು ಪಾಲುದಾರಿಕೆಗಳನ್ನು ಬಲಪಡಿಸುವ ಮೂಲಕ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ.

ಕರ್ನಾಟಕಕ್ಕೆ ಸಂಬಂಧಿಸಿದ ಕಂಪೆನಿಯ ಬದ್ಧತೆಯನ್ನು ಮೆಗೆಲ್ಲನ್ ಏರೊಸ್ಪೇಸ್ ಪುನರುಚ್ಚರಿಸಿದೆ. ಜಾಗತಿಕ ವೈಮಾಂತರಿಕ್ಷ ಕೇಂದ್ರವಾಗಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿರುವ ಕಂಪೆನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಉದ್ಯಮಿಗಳ ಜೊತೆಗಿನ ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News