ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋಗೋದು ಖಚಿತ: ಎಚ್.ಡಿ. ಕುಮಾರಸ್ವಾಮಿ

Update: 2023-10-09 16:24 GMT

ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಐದು ತಿಂಗಳಲ್ಲೆ ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಸರಕಾರವು ಪತನವಾಗುವುದು ಖಚಿತ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗೋದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಸೋಮವಾರ ರಾಮನಗರದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮನ್ನು ಹಾಸನಕ್ಕೆ ಓಡಿಸಬಹುದು. ಆದರೆ, ಡಿ.ಕೆ.ಶಿವಕುಮಾರ್ ಒಮ್ಮೆ ತಿಹಾರ್ ಜೈಲು ನೋಡಿಕೊಂಡು ಬಂದಿದ್ದಾರೆ. ಅವರು ಶಾಶ್ವತವಾಗಿ ತಿಹಾರ್‍ ಗೆ ಹೋದರೂ ಅಚ್ಚರಿ ಅಲ್ಲ ಎಂದರು.

ಜೆಡಿಎಸ್-ಕಾಂಗ್ರೆಸ್ ಸರಕಾರ ಪತನಕ್ಕೆ ಡಿ.ಕೆ. ಶಿವಕುಮಾರ್ ಕಾರಣ. ನನ್ನ ಕೈಯನ್ನು ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ್ದನ್ನು ಕೇಳಿ ಮೋಸ ಹೋದೆ. ನನ್ನನ್ನು ನಡುರಸ್ತೆಯಲ್ಲಿ ಕೈಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು ಎಂದು ಕುಮಾರಸ್ವಾಮಿ ಟೀಕಿಸಿದರು.

ಮೈತ್ರಿ ಸರಕಾರದಲ್ಲಿ ನನ್ನ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಯಾವುದೆ ವೈಮನಸ್ಸು ಇರಲಿಲ್ಲ. ಡಿ.ಕೆ.ಶಿವಕುಮಾರ್ ಬೆಳಗಾವಿಯ ಡಿಸಿಸಿ ಬ್ಯಾಂಕ್‍ನ ವಿಚಾರದಲ್ಲಿ ಕೈ ಹಾಕಿದ್ದಕ್ಕೆ ನಾನು ಬಲಿಪಶುವಾದೆ. ಆದರೆ, ಮೊಸಳೆ ಕಣ್ಣೀರು ಸುರಿಸಿ ಅವರು ಅನುಕಂಪಗಿಟ್ಟಿಸಿಕೊಂಡರು ಎಂದು ಕುಮಾರಸ್ವಾಮಿ ಆರೋಪಿಸಿದರು.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಯಾವ ರೀತಿ ಮೋಸದಿಂದ ಸೋಲಿಸಿದರು. ನಾವು ಅದೇ ರೀತಿ ಮೈತ್ರಿ ಧರ್ಮ ಪಾಲಿಸದೆ ಮೋಸ ಮಾಡಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಫಲಿತಾಂಶ ಬೇರೆಯಾಗಿರುತ್ತಿತ್ತು ಎಂದು ಅವರು ಹೇಳಿದರು.

ಕುಮಾರಣ್ಣ ಹಿಂದೆ ಏನು ಮಾಡಿದ್ದರು, ಮುಂದೆ ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ತಮ್ಮ ಹೇಳಿಕೆ ಮೂಲಕ ತಿಳಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಪ್ಲಾನ್ ಏನಿದೆ ಎಂಬುದನ್ನು ಹೇಳಿದ್ದಾರೆ. ಅವರು ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಹೇಳಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ತಂಗಿ, ತಮ್ಮ ಹಾಗೂ ನನ್ನ ಹೆಂಡತಿ ಮೇಲೆ ಕೇಸ್ ಹಾಕಿದ್ದನ್ನು ಈಗ ನೆನಪಿಸಿಕೊಂಡಿದ್ದಾರೆ. ಮುಂದೆ ಏನು ಮಾಡಬೇಕು ಅಂದುಕೊಂಡಿದ್ದಾರೊ ಅದನ್ನು ಹೇಳಿದ್ದಾರೆ.

-ಡಿ.ಕೆ.ಶಿವಕುಮಾರ್, ಡಿಸಿಎಂ

ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿ ಎಂದು ಅಮಿತ್ ಶಾಗೆ ಕುಮಾರಸ್ವಾಮಿ ಮನವಿ ಮಾಡಿರಬೇಕು. ಇವರ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರುವ ಜಾಯಮಾನ ನಮ್ಮದಲ್ಲ. ಇವರ ಕನಸು ಕನಸಾಗಿಯೆ ಉಳಿಯುತ್ತದೆ. ಜೆಡಿಎಸ್ ಪಕ್ಷದ ನಾಯಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇವರ ನಡೆ, ನುಡಿಗಳನ್ನು ಗಮನಿಸುತ್ತಿರುವ ಅವರ ಪಕ್ಷದ ಕಾರ್ಯಕರ್ತರು ತಮ್ಮ ದಾರಿ ನೋಡಿಕೊಳ್ಳುತ್ತಿದ್ದಾರೆ.

-ಡಿ.ಕೆ.ಸುರೇಶ್, ಸಂಸದ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News