ಮಾಜಿ ಸಚಿವ ಎಚ್.ಡಿ.ರೇವಣ್ಣ ಜೈಲು ಪಾಲು ; ಜಾಮೀನು ಅರ್ಜಿ ವಿಚಾರಣೆ ನಾಳೆಗೆ(ಮೇ.9) ಮುಂದೂಡಿಕೆ
ಬೆಂಗಳೂರು : ಮೈಸೂರಿನ ಕೆ.ಆರ್.ನಗರದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಸಂಬಂಧ ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಾಳೆಗೆ(ಮೇ.9) ಮುಂದೂಡಿಕೆ ಆಗಿದೆ.
ಆರೋಪಿ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನ್ಯಾಯಾಧೀಶರು ನಾಳೆಗೆ ವಿಚಾರಣೆ ಮುಂದೂಡಿದ್ದಾರೆ.
ಇದೇ ವೇಳೆ ಎಸ್ಐಟಿ ವಶದಲ್ಲಿದ್ದ ಮಾಜಿ ಸಚಿವ ಎಚ್.ಡಿ ರೇವಣ್ಣರನ್ನು 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ 17ನೇ ಎಸಿಎಂಎಂ ನ್ಯಾಯಾಲಯ ನ್ಯಾಯಧೀಶ ರವೀಂದ್ರಕುಮಾರ್ ಕಟ್ಟಿಮನಿ ಆದೇಶ ನೀಡಿದ್ದಾರೆ. ಇದರಿಂದ ಆರೋಪಿ ಶಾಸಕ ಹೆಚ್.ಡಿ.ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಗಂಭೀರ ಸ್ವರೂಪದ ಪ್ರಕರಣ ಹಿನ್ನೆಲೆ ರೇವಣ್ಣ ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದ ‘ಎಸ್‌ಐಟಿ’ ತನಿಖಾಧಿಕಾರಿಗಳು, ಅವಧಿ ಮುಗಿದಿದ್ದರಿಂದ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ್ದ 17ನೆ ಎಸಿಎಂಎಂ ನ್ಯಾಯಾಲಯ, ಆರೋಪಿ ರೇವಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮೇ 4ರಂದು ಬಂಧಿತರಾಗಿದ್ದ ರೇವಣ್ಣ ಅವರನ್ನು ನಾಲ್ಕು ದಿನಗಳ ಕಾಲ ‘ಎಸ್‌ಐಟಿ’ ವಶಕ್ಕೆ ನೀಡಲಾಗಿತ್ತು. ಇನ್ನೂ, ತನಿಖಾಧಿಕಾರಿಗಳ ವಶದಲ್ಲಿದ್ದಾಗ ಎಚ್.ಡಿ.ರೇವಣ್ಣ ತನಿಖಾಧಿಕಾರಿಗಳಿಗೆ ಸಹಕರಿಸದೇ ನಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸಬಹುದು. ಆದ್ದರಿಂದ ನ್ಯಾಯಾಂಗ ಬಂಧನಕ್ಕೆ ನೀಡಬೇಕೆಂದು ಎಸ್‌ಐಟಿ ಪರ ವಕೀಲರು ವಾದ ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಉಲ್ಲೇಖಿಸಿ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಪರ ವಕೀಲರು, ತಪ್ಪೊಪ್ಪಿಗೆ ನೀಡಿಲ್ಲವೆಂದ ಮಾತ್ರಕ್ಕೆ ತನಿಖೆಗೆ ಅಸಹಕಾರ ನೀಡಿದ್ದಾರೆ ಎನ್ನಲು ಸಾಧ್ಯವಿಲ್ಲ, ಆದ್ದರಿಂದ ನ್ಯಾಯಾಂಗ ಬಂಧನಕ್ಕೆ ನೀಡಬಾರದು ಎಂದು ಮನವಿ ಸಲ್ಲಿಸಿದ್ದರು.
ಇದೇ ವೇಳೆ, ಪೊಲೀಸ್ ಕಸ್ಟಡಿಯಲ್ಲಿ ಏನಾದರೂ ತೊಂದರೆಯಾಯಿತೇ? ಎಂಬ ನ್ಯಾಯಾಧೀಶರ ಪ್ರಶ್ನೆಗೆ ನಾನು ಯಾವುದೇ ತಪ್ಪು ಮಾಡಿಲ್ಲ, ಮೂರು ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ಅನಾರೋಗ್ಯದ ಸಮಸ್ಯೆ ಇದ್ದರೂ ಸಹ ನನ್ನನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ ಎಂದು ರೇವಣ್ಣ ಅಳಲು ತೋಡಿಕೊಂಡರು ಎನ್ನಲಾಗಿದೆ.
ದೇವರಾಜೇಗೌಡ ವಿರುದ್ಧ ದೂರು: ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ವಿಶೇಷ ತನಿಖಾ ತಂಡಕ್ಕೆ ಕರ್ನಾಟಕ ಪಿಂಜಾರ ಜನಾಂಗ ಕ್ಷೇಮಾಭಿವೃದ್ಧಿ ಸಂಘಟನೆ ದೂರು ಸಲ್ಲಿಸಿದೆ.
ಕಳೆದ ಎರಡು ವರ್ಷಗಳಿಂದ ಪೆನ್‍ಡ್ರೈವ್ ಇದೆ ಎಂದು ಹೇಳಿಕೊಂಡಿರುವ ದೇವರಾಜೇಗೌಡ ಪೊಲೀಸರಿಗೆ ಯಾಕೆ ದೂರು ನೀಡಿರಲಿಲ್ಲ?. ಒಂದು ವೇಳೆ ದೂರು ನೀಡಿದ್ದರೆ ಸಂತ್ರಸ್ತೆಯರ ಮಾನ-ಮಾರ್ಯಾದೆ ಉಳಿಯುತ್ತಿತ್ತು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಬಷೀರ್ ಅಹ್ಮದ್ ದೂರಿದ್ದಾರೆ.
ಮಹಿಳಾ ಆಯೋಗಗಕ್ಕೆ ದೂರು: ಅಪಾರ ಪ್ರಮಾಣದಲ್ಲಿ ಪೆನ್‍ಡ್ರೈವ್‍ಗಳನ್ನು ಹಂಚುವ ಮೂಲಕ ಮಹಿಳೆಯರ ಮಾನಹಾನಿಗೆ ಕಾರಣವಾಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಕುರಿತ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಒತ್ತಾಯಿಸಿದರು.