ಮಕ್ಕಳ ಹಿತದೃಷ್ಟಿಯಿಂದ ದಸರಾ ರಜೆ ವಿಸ್ತರಣೆ ಮಾಡಿ: ಸಭಾಪತಿ ಬಸವರಾಜ ಹೊರಟ್ಟಿ ಮನವಿ

Update: 2023-10-22 17:43 GMT

ಹುಬ್ಬಳ್ಳಿ: ಮಕ್ಕಳ ಹಿತದೃಷ್ಟಿಯಿಂದ ದಸರಾ ರಜೆಯನ್ನು ವಿಸ್ತರಣೆ ಮಾಡುವಂತೆ  ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಫೋನ್‌ ಮೂಲಕ ಮನವಿ ಮಾಡಿದ್ದಾರೆ. 

ರವಿವಾರ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ದಸರಾ ರಜೆಯನ್ನು ವಿಸ್ತರಣೆ ಮಾಡಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿದ ಸಭಾಪತಿ ಹೊರಟ್ಟಿ, ಶಿಕ್ಷಣ ಸಚಿವರಿಗೆ ರಜೆ ವಿಸ್ತರಣೆ ಮಾಡುವಂತೆ ಆಗ್ರಹಿಸಿದರು. 

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೊರಟ್ಟಿ, "ಶಿಕ್ಷಣ ವ್ಯವಸ್ಥೆ ಇವತ್ತು ಸರಿಯಾದ ರೀತಿಯಲ್ಲಿಲ್ಲ. ಹಿಂದೆಲ್ಲ ಮೇ 29 ಅಥವಾ 30 ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದವು. ಅಕ್ಟೋಬರ್​ 2ನೇ ತಾರೀಖಿನಿಂದ 30ನೇ ತಾರೀಖಿನ ವರೆಗೆ ದಸರಾ ರಜೆ ಇರುತ್ತಿತ್ತು. ನಂತರ ಜ್ಞಾನವಿಲ್ಲದ ಕೆಲವು ಅಧಿಕಾರಿಗಳು ತಮಗೆ ಹೇಗೆ ಬೇಕೋ ಹಾಗೆ ದಸರಾಗೆ 4 ದಿನ, ದೀಪಾವಳಿಗೆ 4 ದಿನ ರಜೆ ಕೊಟ್ಟಿದ್ದಾರೆ. ಇದು ಸರಿಯಾದ ವ್ಯವಸ್ಥೆಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ʼʼಈ ಪದ್ಧತಿಯನ್ನು ಕೆಲವು ಅಧಿಕಾರಿಗಳು ಹಾಳು ಮಾಡಿದರು. ನಾನು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈಗ ಮತ್ತೊಂದು ಪತ್ರ ಬರೆಯುತ್ತೇನೆ. ಈ ಹಿಂದೆ ಇದ್ದಂತಹ ಪದ್ಧತಿಯನ್ನೇ ಸರ್ಕಾರ ಮುಂದುವರಿಸಿಕೊಂಡು ಹೋಗಬೇಕೆಂದು" ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News