ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪರಿಹಾರ ಮೊತ್ತ ನೀಡಲು 'ಭಿಕ್ಷಾಟನೆ ಅಭಿಯಾನ' ಮೂಲಕ ಹಣ ಸಂಗ್ರಹಿಸುತ್ತಿದ್ದ ರೈತ ಮುಖಂಡನಿಗೆ ಮಾರಣಾಂತಿಕ ಹಲ್ಲೆ
ಬಾಗಲಕೋಟೆ, ಆ.28: ರೈತ ಮುಖಂಡ ಯಲ್ಲಪ್ಪ ಹೆಗಡೆ ಬೀಳಗಿ ಮೇಲೆ ಜಿಲ್ಲೆಯ ಮುಧೋಳ ತಾಲೂಕಿನ ಇಂಗಳಗಿ ಕ್ರಾಸ್ ಬಳಿ ಇಂದು ಬೆಳಗ್ಗೆ ಮಾರಣಾಂತಿಕ ಹಲ್ಲೆ ನಡೆದಿರುವುದು ವರದಿಯಾಗಿದೆ.
ಯಲ್ಲಪ್ಪ ಹೆಗಡೆ ಬೀಳಗಿ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಮುಧೋಳ ತಾಲೂಕಿನ ಇಂಗಳಗಿ ಕ್ರಾಸ್ ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಬಂದ ಐವರು ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಯಲ್ಲಪ್ಪ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಮುಧೋಳದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.
ಯಲ್ಲಪ್ಪ ಹೆಗಡೆ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು ಮಾಜಿ ಸಚಿವ ಮುರುಗೇಶ್ ನಿರಾಣಿ ಈ ಬಾರಿಯ ವಿಧಾನಸಭಾ ಚುನಾವಣೆಯ ವೇಳೆ ಯಲ್ಲಪ್ಪ ಹೆಗಡೆ ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. 5 ಕೋಟಿ ರೂ. ಪರಿಹಾರ ಕೋರಿ ಲೀಗಲ್ ನೋಟಿಸ್ ಕಳಿಸಿದ್ದರು.
ನಿರಾಣಿ ಕೇಳಿರುವ ಪರಿಹಾರ ಮೊತ್ತವನ್ನು 'ಭಿಕ್ಷಾಟನೆ ಅಭಿಯಾನ'ದ ಮೂಲಕ ಸಂಗ್ರಹಿಸಿ ನೀಡುವುದಾಗಿ ಯಲ್ಲಪ್ಪ ಹೆಗಡೆ ಹೇಳಿದ್ದರು. ಅದರಂತೆ ಯಲ್ಲಪ್ಪ ಹೆಗಡೆ ಬೀಳಗಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇಂದು ಪೂರ್ವಾಹ್ನ 11 ಗಂಟೆಗೆ ಭಿಕ್ಷಾಟನೆ ನಡೆಸಲು ತೀರ್ಮಾನಿಸಿದ್ದರು. 'ಭಿಕ್ಷಾಟನೆ ಅಭಿಯಾನ' ನಡೆಸಲು ಬರುತ್ತಿದ್ದ ವೇಳೆ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ರೈತ ಮುಖಂಡ ನಡೆಸುತ್ತಿದ್ದ ಅಭಿಯಾನದ ಪೋಸ್ಟರ್